ಲಾಸ್ ಏಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ (Oscars 2025) ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಬೆಸ್ಟ್ ಸಿನಿಮಾ ಪ್ರಶಸ್ತಿಯು ಅನೋರಾ ಸಿನಿಮಾಗೆ ಲಭಿಸಿದ್ದು, ಇದೇ ಸಿನಿಮಾದ ಮೈಕಿ ಮ್ಯಾಡಿಸನ್ (Mikey Madison) ಅವರಿಗೆ ಬೆಸ್ಟ್ ನಟಿ ಪ್ರಶಸ್ತಿಯೂ ದೊರೆತಿದೆ. ಅಲ್ಲದೆ, ಅನೋರಾ (Anora) ಸಿನಿಮಾ ನಿರ್ದೇಶಿಸಿದ ಸಿಯಾನ್ ಬೇಕರ್ ಅವರಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ದೊರೆತಿದೆ. ಇದರೊಂದಿಗೆ 97ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಅನೋರಾ ಸಿನಿಮಾ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದುಕೊಂಡಂತಾಗಿದೆ.
ಬೆಸ್ಟ್ ಆ್ಯಕ್ಟರ್ ಇನ್ ಲೀಡ್ ರೋಲ್ ಪ್ರಶಸ್ತಿಯು ದಿ ಬ್ರ್ಯೂಟಲಿಸ್ಟ್ ಸಿನಿಮಾದಲ್ಲಿ ನಟಿಸಿದ ಆಡ್ರಿಯೆನ್ ಬ್ರೋಡಿ ಅವರಿಗೆ ಲಭಿಸಿದೆ. ಇದೇ ಸಿನಿಮಾಗೆ ಬೆಸ್ಟ್ ಓರಿಜಿನಲ್ ಸ್ಕೋರ್ ಅವಾರ್ಡ್ ಕೂಡ ದೊರೆತಿದೆ. ಅಲ್ಲದೆ, ದಿ ಬೆಸ್ಟ್ ಸಿನಿಮಾಟೋಗ್ರಫಿ ಪ್ರಶಸ್ತಿಯನ್ನೂ ಇದೇ ಸಿನಿಮಾಗೆ ನೀಡಲಾಗಿದೆ. ಬ್ರೆಜಿಲ್ ನ ಬೆಸ್ಟ್ ಇಂಟರ್ ನ್ಯಾಷನಲ್ ಸಿನಿಮಾ ಪ್ರಶಸ್ತಿಯು ಐ ಆ್ಯಮ್ ಸ್ಟಿಲ್ ಹಿಯರ್ ಸಿನಿಮಾಗೆ ಲಭಿಸಿದೆ.
ಭಾರತದ ಕಿರುಚಿತ್ರಕ್ಕೆ ನಿರಾಸೆ
ಪ್ರಿಯಾಂಕಾ ಚೋಪ್ರಾ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದ, ಹಿಂದಿಯ ಅನುಜಾ ಕಿರುಚಿತ್ರವು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು. ಹಾಗಾಗಿ, ಹೆಚ್ಚಿನ ನಿರೀಕ್ಷೆಗಳು ಇದ್ದವು. ಆದರೆ, ವಿಕ್ಟೋರಿಯಾ ವಾರ್ಮರ್ ಡ್ಯಾಮ್ ಹಾಗೂ ಟ್ರೆಂಟ್ ಅವರ ಐ ಆ್ಯಮ್ ನಾಟ್ ಎ ರೋಬೊ ಕಿರುಚಿತ್ರವು ಆಸ್ಕರ್ ಗೆದ್ದುಕೊಂಡಿದೆ. 9 ವರ್ಷದ ಬಾಲಕಿ ಸುತ್ತ ನಡೆಯುವುದೇ ಅನುಜಾ ಕಿರುಚಿತ್ರವಾಗಿತ್ತು. ಇದು 12 ನಿಮಿಷದ ಕಿರುಚಿತ್ರವಾಗಿದೆ. ಆದರೆ, ಇದು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಅನುಜಾ ಕಿರುಚಿತ್ರವು ಭಾರತದಿಂದ ನಾಮಿನೇಟ್ ಆಗಿದ್ದ ಏಕೈಕ ಸಿನಿಮಾ ಆಗಿತ್ತು.
ಹಿಂದಿಯಲ್ಲಿ ಮಾತು ಆರಂಭಿಸಿದ ನಿರೂಪಕ
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕ ಕೊನನ್ ಓಬ್ರಿಯಾನ್ ಅವರು ಹಿಂದಿಯಲ್ಲಿ ಮಾತು ಆರಂಭಿಸಿದ್ದು ವಿಶೇಷವಾಗಿತ್ತು. “ಭಾರತದಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ವೀಕ್ಷಿಸುತ್ತಿರುವವರಿಗೆಲ್ಲ ನಮಸ್ಕಾರ. ನೀವು ಬೆಳಗ್ಗಿನ ತಿಂಡಿ ಸವಿಯುತ್ತ ಕಾರ್ಯಕ್ರಮ ವೀಕ್ಷಿಸುತ್ತಿರುವುದಕ್ಕೆ ಸಂತಸವಾಗಿದೆ” ಎಂದು ಕೊನನ್ ಓಬ್ರಿಯಾನ್ ಅವರು ಹಿಂದಿಯಲ್ಲೇ ಹೇಳಿರುವುದು ಗಮನ ಸೆಳೆಯಿತು.