ಬೆಂಗಳೂರು:ಸರ್ಕಾರದಿಂದ ಗೌರವ ಧನ ಪಡೆಯುವುದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಬರುತ್ತಿರುವ ನಕಲಿ ಹೋರಾಟಗಾರರನ್ನು ದಂಡಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಮುಳಬಾಗಿಲು ತಾಲೂಕಿನ ಮಂಡಿಕಲ್ ಗ್ರಾಮದ 85 ವರ್ಷದ ಎಂ.ವಿ. ಶ್ರೀನಿವಾಸ ಗೌಡ ಎಂಬ ನಕಲಿ ಸ್ವಾತಂತ್ರ್ಯ ಹೋರಾಟಗಾರನ ಪ್ರಕರಣದಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಆತನಿಂದ ಪುನಃ ಹಣ ವಸೂಲು ಮಾಡಲು ಕೋಲಾರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾ. ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯಪೀಠ ಆದೇಶ ಪ್ರಕಟಿಸಿದೆ.
ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಯಾವುದೇ ತೊಂದರೆ ಆಗಬಾರದು. ಅವರ ಅರ್ಜಿಗಳನ್ನು ಸ್ವೀಕರಿಸಿ ಸಕಾಲದಲ್ಲಿ ಗೌರವಧನ ಒದಗಿಸಬೇಕು. ನಕಲಿ ಸ್ವಾತಂತ್ರ್ಯ ಹೋರಾಟಗಾರರನ್ನು ದಂಡಿಸಬೇಕು. ಅಂತಹ ಪ್ರಕರಣಗಳನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.
ಎಂ.ವಿ.ಶ್ರೀನಿವಾಸ ಗೌಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ವಾತಂತ್ರ್ಯ ಹೋರಾಟಗಾರರೆಂದು ಹಕ್ಕು ಮಂಡಿಸಿ ಗೌರವಧನ ಪಡೆಯುತ್ತಿದ್ದಾರೆಂದು ನಾಗರಾಜ ಎಂಬುವರು 2015ರ ಆ.1ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತರು ಆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋಲಾರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಆಗ ತನಿಖೆ ನಡೆಸಿದಾಗ ಶ್ರೀನಿವಾಸಗೌಡ ನಕಲಿ ದಾಖಲೆ ಸಲ್ಲಿಸಿ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಪಡೆಯುತ್ತಿರುವುದು ಸಾಬೀತಾಗಿತ್ತು.
ನಂತರ ತಹಸೀಲ್ದಾರ್ 2019ರ ಮೇ 20ರಂದು ಅರ್ಜಿದಾರರಿಗೆ ನೋಟಿಸ್ ನೀಡಿ 2019ರ ಮೇ 30ರೊಳಗೆ 9,08,661 ರೂ. ಗೌರವಧನವನ್ನು ಮರಳಿ ನೀಡುವಂತೆ ಸೂಚಿಸಿದ್ದರು. ಹೀಗಾಗಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.