ಬೆಂಗಳೂರು ನಗರ : ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಗ್ರಾಮ ಪಂಚಾಯತಿ ವತಿಯಿಂದ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಗ್ರಾಮ ಸಭೆ ನಡೆಯಿತು. ಬನ್ನೇರುಘಟ್ಟ ಕಾಡಂಚಿನಲ್ಲಿ ಸುಮಾರು 19 ಸಣ್ಣಪುಟ್ಟ ಗ್ರಾಮಗಳಿದ್ದು, ಇಲ್ಲಿನ ನಿವಾಸಿಗಳು ಐದಾರು ತಲೆಮಾರಿನಿಂದ ಕಾಡಿನೊಂದಿಗೆ ನಂಟು ಹೊಂದಿ ಬದುಕುತ್ತಿದ್ದಾರೆ. ಅರಣ್ಯವನ್ನು ಉಳಿಸಿ ಬೆಳೆಸಿಕೊಂಡೇ ಜೀವನ ನಡೆಸುತ್ತಿರುವ ಗ್ರಾಮಸ್ಥರು, ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿ ನೆಪದಲ್ಲಿ ಕಿರುಕುಳ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2022ರಲ್ಲಿ ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯವನ್ನು ಒಂದು ಕಿಲೋಮೀಟರ್ ಎಂದು ನಿಗದಿ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಸೆಂಟ್ರಲ್ ಎಂಪವರ್ಡ್ ಕಮಿಟಿ (CEC) ರಚನೆ ಮಾಡಿದ್ದು, ವಾಸ್ತವ ಪರಿಶೀಲನೆಗಾಗಿ ಸಮಿತಿ ಬನ್ನೇರುಘಟ್ಟಕ್ಕೆ ಭೇಟಿ ನೀಡಿತ್ತು. ಆದರೆ ಸಮಿತಿ ಭೇಟಿ ವೇಳೆ ಸ್ಥಳೀಯ ನಿವಾಸಿಗಳು ಹಾಗೂ ರೈತರ ಅಹವಾಲುಗಳನ್ನು ಆಲಿಸದೇ, ಏಕಪಕ್ಷೀಯವಾಗಿ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯನ್ನು ನಿಗದಿಪಡಿಸುವ ವರದಿ ಸಲ್ಲಿಸಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ನಾಲ್ಕೂವರೆ ಕಿಲೋಮೀಟರ್ ವರೆಗೆ ಪರಿಸರ ಸೂಕ್ಷ್ಮ ವಲಯ ನಿಗದಿಗೆ ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿಯಿಂದ ಕಾಡಂಚಿನ ಗ್ರಾಮಗಳ ಭವಿಷ್ಯ ಅಸ್ತವ್ಯಸ್ತವಾಗುವ ಭೀತಿ ಎದುರಾಗಿದೆ. ಆದ್ದರಿಂದ ಕಾಡಂಚಿನ ವಾಸಿಗಳ ಸ್ಥಿತಿಗತಿ ಸಮಗ್ರವಾಗಿ ಪರಿಶೀಲನೆ ನಡೆಸಬೇಕು ಹಾಗೂ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಎಂದು ಗ್ರಾಮ ಸಭೆಯಲ್ಲಿ ಒತ್ತಾಯಿಸಲಾಯಿತು.
ಇದನ್ನೂ ಓದಿ : ಕೆ.ಸಿ ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ, ಸಂಶೋಧನಾ ಮಹಾವಿದ್ಯಾಲಯವಾಗಿ ಉನ್ನತ್ತೀಕರಿಸಲು ಸರ್ಕಾರ ಸಜ್ಜು



















