ಬೆಂಗಳೂರು: ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಒಪ್ಪೋ ಸಂಸ್ಥೆಯು, ಗ್ರಾಹಕರ ಅಭಿರುಚಿಗೆ ತಕ್ಕಂತೆ ತನ್ನ ಜನಪ್ರಿಯ ಫ್ಲ್ಯಾಗ್‌ಶಿಪ್ ಸರಣಿಯಾದ ‘ಒಪ್ಪೋ ಫೈಂಡ್ X9’ ಅನ್ನು ಆಕರ್ಷಕವಾದ ‘ವೆಲ್ವೆಟ್ ರೆಡ್’ ಬಣ್ಣದಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಟೈಟಾನಿಯಂ ಗ್ರೇ ಮತ್ತು ಸ್ಪೇಸ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದ್ದ ಈ ಫೋನ್, ಇದೀಗ ಹೊಸ ಕೆಂಪು ಬಣ್ಣದ ಆಯ್ಕೆಯೊಂದಿಗೆ ಟೆಕ್ ಪ್ರಿಯರನ್ನು ಸೆಳೆಯಲು ಮುಂದಾಗಿದೆ.
ಈ ಹೊಸ ವೆಲ್ವೆಟ್ ರೆಡ್ ಆವೃತ್ತಿಯು ಕೇವಲ 12GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯದ ಒಂದೇ ಮಾದರಿಯಲ್ಲಿ ಲಭ್ಯವಿದ್ದು, ಇದರ ಬೆಲೆಯನ್ನು 74,999 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಗ್ರಾಹಕರು ಒಪ್ಪೋ ಇಂಡಿಯಾ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತ ಇರುವ ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಇಂದಿನಿಂದಲೇ ಈ ಫೋನ್ ಖರೀದಿಸಬಹುದಾಗಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಖರೀದಿಸುವ ಗ್ರಾಹಕರಿಗೆ ಶೇಕಡಾ 10ರಷ್ಟು ತ್ವರಿತ ಕ್ಯಾಶ್‌ಬ್ಯಾಕ್ ಲಭ್ಯವಿದ್ದು, ಈ ಆಫರ್ ಮೂಲಕ ಫೋನ್‌ನ ಪರಿಣಾಮಕಾರಿ ಬೆಲೆ 67,499 ರೂಪಾಯಿಗಳಿಗೆ ಇಳಿಕೆಯಾಗಲಿದೆ. ಇದರೊಂದಿಗೆ 24 ತಿಂಗಳ ನೋ-ಕಾಸ್ಟ್ ಇಎಂಐ ಸೌಲಭ್ಯ, ಕ್ಯಾಶಿಫೈ ಮೂಲಕ ಎಕ್ಸ್‌ಚೇಂಜ್ ಬೋನಸ್ ಹಾಗೂ ಜಿಯೋ ಗ್ರಾಹಕರಿಗೆ ವಿಶೇಷ ಲಾಭಗಳನ್ನು ಕಂಪನಿ ಘೋಷಿಸಿದೆ.
ಹಾರ್ಡ್ವೇರ್ ಬದಲಾವಣೆ ಇಲ್ಲ
ಈ ಫೋನ್‌ನ ವೈಶಿಷ್ಟ್ಯಗಳ ಕಡೆಗೆ ಗಮನಹರಿಸುವುದಾದರೆ, ಹೊಸ ಬಣ್ಣವನ್ನು ಹೊರತುಪಡಿಸಿ ಹಾರ್ಡ್‌ವೇರ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದು 6.59 ಇಂಚಿನ ಅಮೋಲ್ಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಅತ್ಯುತ್ತಮ ದೃಶ್ಯಾವಳಿ ಅನುಭವ ನೀಡುತ್ತದೆ. ಕಾರ್ಯಕ್ಷಮತೆಗಾಗಿ ಅತ್ಯಂತ ವೇಗದ ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ. ಛಾಯಾಗ್ರಹಣ ಪ್ರಿಯರಿಗಾಗಿ ಹ್ಯಾಸೆಲ್‌ಬ್ಲಾಡ್ ಟ್ಯೂನಿಂಗ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದರಲ್ಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ಗಳಿವೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಸಿಲಿಕಾನ್ ಕಾರ್ಬನ್ ಬ್ಯಾಟರಿ
ದೀರ್ಘಕಾಲದ ಬಳಕೆಗೆ ಅನುಕೂಲವಾಗುವಂತೆ ಬರೋಬ್ಬರಿ 7,025mAh ಸಾಮರ್ಥ್ಯದ ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಈ ಫೋನ್ ಒಳಗೊಂಡಿದೆ. ಇದು 80W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು IP69 ರೇಟಿಂಗ್ ಹೊಂದಿರುವ ಈ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 16 ಆಧಾರಿತ ಕಲರ್ ಓಎಸ್ 16 ಮೂಲಕ ಕಾರ್ಯನಿರ್ವಹಿಸುತ್ತದೆ. ವಿಭಿನ್ನ ಲುಕ್ ಬಯಸುವ ಪ್ರೀಮಿಯಂ ಗ್ರಾಹಕರಿಗೆ ಈ ವೆಲ್ವೆಟ್ ರೆಡ್ ಆವೃತ್ತಿ ಸೂಕ್ತ ಆಯ್ಕೆಯಾಗಲಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ 14 ಹುದ್ದೆಗಳ ನೇಮಕ : 1.10 ಲಕ್ಷ ರೂ. ಸ್ಯಾಲರಿ



















