ಹಾಸನ: ಕೊನೆಗೂ ಆಪರೇಷನ್ ವಿಕ್ರಾಂತ್ ಸಕ್ಸಸ್ ಆಗಿದ್ದು, ಜಿಲ್ಲೆಯ ಜನರು ನೆಮ್ಮದಿಯ ಉಸಿರು ಬಿಡುವಂತಾಗಿದೆ.
ವಿಕ್ರಾಂತ್ ಗೆ ಹರಸಾಹಸ ಪಟ್ಟು ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ. ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡುತ್ತಿದ್ದಂತೆ ವಿಕ್ರಾಂತ್ ಸ್ವಲ್ಪ ದೂರ ಓಡಿ ಹೋಗಿ ಕುಸಿದು ಬಿದ್ದಿದೆ. ಜಿಲ್ಲೆಯ ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಗ್ರಾಮದಲ್ಲಿ ವಿಕ್ರಾಂತ್ ನನ್ನು ಸೆರೆ ಹಿಡಿಯಲಾಗಿದೆ.
ಕಾಫಿ ತೋಟದಲ್ಲಿ ಎರಡು ಕಾಡಾನೆಗಳ ಜೊತೆ ವಿಕ್ರಾಂತ್ ನಿಂತಿದ್ದಾಗ ಸೆರೆ ಹಿಡಿಯಲಾಗಿದೆ. ಎರಡು ಕಾಡಾನೆಗಳಿಂದ ವಿಕ್ರಾಂತ್ ಬೇರ್ಪಡಿಸಿ ಅರವಳಿಕೆ ಚುಚ್ಚುಮದ್ದನ್ನು ವೈದ್ಯರು ನೀಡಿದ್ದರು.
ಈ ಭಾಗದಲ್ಲಿ ಪುಂಡಾಟ ಮೆರೆಯುತ್ತಿದ್ದ ವಿಕ್ರಾಂತ್ ನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಎರಡು ದಿನಗಳಿಂದ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುತ್ತಿದ್ದರು. ಈಗ ಶತಾಯಗತಾಯವಾಗಿ ವಿಕ್ರಾಂತ್ ನನ್ನು ಹಿಡಿದಿದ್ದಾರೆ.
ಮೂರು ದಿನಗಳ ಕಾರ್ಯಾಚರಣೆಯಲ್ಲಿ ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಡಿಎಫ್ ಓ ಸೌರಭ್ ಕುಮಾರ್ ಕೂಡ ಮೂರು ದಿನಗಳಿಂದಲೂ ಸಿಬ್ಬಂದಿಯೊಂದಿಗೆ ಜೊತೆಯಲ್ಲಿದ್ದರು.