ಕಾರವಾರ : ಪ್ರಧಾನಿ ಮೋದಿ ಯಾರಿಗಾದರೂ ಉತ್ತರ ಕೊಡುತ್ತಾರಾ ? ಅವರಿಗೆ ಪ್ರಶ್ನೆ ಕೇಳುವುದಕ್ಕೆ ಅವಕಾಶ ಇಲ್ಲ. ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ ಎನ್ನುವ ಸರ್ವಾಧಿಕಾರಿ ಧೋರಣೆ ಇದು. ಪುಲ್ವಾಮಾ ಘಟನೆ ಆಗಲು ವೈಫಲ್ಯ ಏನು ಅನ್ನೋದನ್ನ ಹೇಳುವುದೇ ಇಲ್ಲ. ನಮ್ಮ 40 ಸೈನಿಕರು ಹುತಾತ್ಮರಾಗಿದ್ದಕ್ಕೆ ವೈಫಲ್ಯವೇನು ಎನ್ನುವುದನ್ನೇ ಬಹಿರಂಗಪಡಿಸಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುಂಡೂರಾವ್, ಘಟನೆ ನಡೆದ ಬಳಿಕ ನಾವು ಏನು ಮಾಡುತ್ತೇವೆ ಎನ್ನುತ್ತಾರೆ ಹೊರತು, ಆಗುವುದಕ್ಕೆ ಕಾರಣ ಹೇಳಲ್ಲ. ಕೇಂದ್ರ ಸರ್ಕಾರಕ್ಕೆ ಹೊಣೆಗಾರಿಕೆನೇ ಇಲ್ಲ. ವಿಷಯದ ದಿಕ್ಕು ತಪ್ಪಿಸುತ್ತಾರೆ. ರಾಹುಲ್ ಗಾಂಧಿ, ಖರ್ಗೆ ಸಾಹೇಬರಿಗೆ ಪ್ರಶ್ನೆ ಕೇಳುತ್ತಾರೆ. ಮೋದಿ ಅವರನ್ನು ಪ್ರಶ್ನೆ ಮಾಡುವುದಕ್ಕೆ ಸಿಕ್ಕಿದಾರಾ? ಅಮಿತ್ ಶಾ, ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆ ಇದು.
ಪಹಲ್ಗಾಮ್ ದಾಳಿಯಲ್ಲೂ ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ. ಅಮೆರಿಕಾ ಅಧ್ಯಕ್ಷ ಟ್ರಂಪ್ ನಾನೇ ಯುದ್ಧ ನಿಲ್ಲಿಸಿದ್ದೆಂದು ಹೇಳಿದ್ದರು. ಪಾಕಿಸ್ತಾನದವರು ಭಾರತದ 5 ಜೆಟ್‌ಗಳನ್ನು ಹೊಡೆದು ಹಾಕಿದ್ದೇವೆ ಎಂದರು. ಆದರೆ ಕೇಂದ್ರ ಸರ್ಕಾರ ಇದುವರೆಗೂ ಯುದ್ಧ ವಿಮಾನ ಹೊಡೆದಿದ್ದು ಆಗಿದೆಯೋ ಇಲ್ಲವೋ ಎಂದು ಸ್ಪಷ್ಟಪಡಿಸಿಲ್ಲ ಎಂದಿದ್ದಾರೆ.
ದೇಶದ ವಿಷಯ ಬಂದಾಗ ನಾವೆಲ್ಲ ಒಂದೇ, ಆದರೆ ಸತ್ಯಾಂಶ ಮರೆಮಾಚಬಾರದು. ಮೋದಿ ವಿಶ್ವಗುರು ಎಂದು ಹೇಳುತ್ತಾರೆ. ಆದರೆ, ಅಕ್ಕಪಕ್ಕದ ದೇಶಗಳೂ ನಮ್ಮ ಪರ ನಿಲ್ಲುತ್ತಿಲ್ಲ. ಪಾಕ್ ಪ್ರದಾನಿ ಅಮೆರಿಕಾ ಅಧ್ಯಕ್ಷರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ, ಹಾಗಿದ್ದರೆ, ವಿಶ್ವಗುರು ಅಂದರೆ ಏನು? ಸಿದ್ಧರಾಮಯ್ಯ ಅವರ ವಿಚಾರದಲ್ಲಿ ಇ.ಡಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ವಾ? ರಾಜಕೀಯ ವಿಚಾರದಲ್ಲಿ ಯಾಕೆ ಹಸ್ತಕ್ಷೇಪ ಮಾಡುತ್ತಿದ್ದೀರಿ ಎಂದು ಇ.ಡಿಗೆ ಸುಪ್ರೀಂ ಕೇಳಿದೆ. ಇ.ಡಿ, ಐಟಿ, ಎಲೆಕ್ಷನ್ ಕಮಿಷನ್ ಎಲ್ಲವನ್ನೂ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ದೇಶ ಕಟ್ಟಿದಂತಹ ಇಂತಹ ಸಂಸ್ಥೆಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಸರ್ವನಾಶ ಮಾಡುತ್ತಿದೆ.
ರಾಜ್ಯಕ್ಕೆ ಬರಬೇಕಾದ ಬರಗಾಲದ ಪರಿಹಾರವನ್ನು ಕೊಡುವುದಕ್ಕೆ ಕೇಂದ್ರ ಹಿಂದೇಟು ಹಾಕಿತ್ತು. ಸುಪ್ರೀಂ ಕೋರ್ಟ್ ಗೆ ಹೋಗಿ ನಮ್ಮ ಪಾಲು ತರಬೇಕಾದ ಪರಿಸ್ಥಿತಿ ಬಂತು. ಇದರ ಬಗ್ಗೆ ಸಂಸದರಾದ ಕಾಗೇರಿ, ಪ್ರಹ್ಲಾದ್ ಜೋಶಿ ಹೋಗಿ ಮಾತನಾಡಿದ್ದಾರಾ ದೆಹಲಿಯಲ್ಲಿ? ಬಿಜೆಪಿ ಸಂಸದರು, ಮುಖಂಡರು ಏನು ಮಾಡಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ.