ನವ ದೆಹಲಿ : ʼಆಪರೇಷನ್ ಸಿಂಧೂರʼದ ಬಗ್ಗೆ ಸಂಸತ್ ನ ಮುಂಗಾರು ಅಧಿವೇಶನದಲ್ಲಿ 16 ಗಂಟೆಗಳ ಕಾಲ ಚರ್ಚೆ ಮಾಡಲು ನಿರ್ಧರಿಸಲಾಗಿದ್ದು, ಲೋಕಸಭೆಯಲ್ಲಿ ಜು.28ರಂದು ಹಾಗೂ ರಾಜ್ಯಸಭೆಯಲ್ಲಿ ಜು.29ರಂದು ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ.
ರಾಜ್ಯಸಭೆಯ ಸಂಸದೀಯ ಸಲಹಾ ಸಮಿತಿ ಸಭೆ ನಿನ್ನೆ(ಬುಧವಾರ) ನಡೆದಿದ್ದು, ಮೇಲ್ಮನೆಯಲ್ಲಿ ಜು.29ರಂದು ಈ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ವರದಿಯಲ್ಲಿ ಹೇಳಿರುವ ಹಾಗೆ, ಲೋಕಸಭೆಯಲ್ಲಿ 16 ಗಂಟೆಗಳ ಕಾಲ ಈ ವಿಷಯದ ಮೇಲೆ ವಿಶೇಷ ಚರ್ಚೆ ಮಾಡಲು ನಿರ್ಧರಿಸಲಾಗಿದೆ.
ʼಆಪರೇಷನ್ ಸಿಂಧೂರ್ʼ ಬಗ್ಗೆ ನಡೆಸುವ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
ಸದ್ಯ, ನರೇಂದ್ರ ಮೋದಿ ಲಂಡನ್ ಹಾಗೂ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಪ್ರಧಾನಿ ನಾಲ್ಕು ದಿನಗಳ ಕಾಲ ಪ್ರವಾಸದಲ್ಲಿರುವಾಗಲೇ, ಈ ಚರ್ಚೆಯನ್ನು ಸಂಸತ್ತಿನಲ್ಲಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಸಂಸದೀಯ ಸಲಹಾ ಸಂಇತಿ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ, ʼಆಪರೇಷನ್ ಸಿಂಧೂರ್ʼ ಚರ್ಚೆಯಲ್ಲಿ ಪ್ರಧಾನಿ ಪಾಲ್ಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿದೆ ಎಂದಿದ್ದಾರೆ.



















