ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೂರೇ ದಿನಗಳಲ್ಲಿ ದೇಶಾದ್ಯಂತ ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ಭರದಿಂದ ಸಾಗಿದೆ. ಶುಕ್ರವಾರ ಅಧಿಕಾರಿಗಳು ನೂರಾರು ಅಕ್ರಮ ವಲಸಿಗರನ್ನು ಬಂಧಿಸಿದ್ದು, ಇನ್ನೂ ಹಲವರನ್ನು ಗಡೀಪಾರು ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಶ್ವೇತಭವನದಲ್ಲಿ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೀವಿಟ್, ಕೇವಲ ಕೆಲವೇ ಗಂಟೆಗಳಲ್ಲಿ ನಮ್ಮ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ 538 ಅಕ್ರಮ ವಲಸಿಗರನ್ನು ಬಂಧಿಸಿದ್ದಾರೆ. ನೂರಾರು ಮಂದಿಯನ್ನು ಸೇನಾ ವಿಮಾನಗಳ ಮೂಲಕ ಗಡೀಪಾರು ಮಾಡಲಾಗಿದೆ ಎಂದಿದ್ದಾರೆ.
“ಒಬ್ಬ ಶಂಕಿತ ಭಯೋತ್ಪಾದಕ, ಟ್ರೆನ್ ಡೆ ಅರಗುವಾ ಗ್ಯಾಂಗ್‌ನ 4 ಸದಸ್ಯರು, ಅಪ್ರಾಪ್ತ ವಯಸ್ಸಿನವರ ಮೇಲೆ ಲೈಂಗಿಕ ಅಪರಾಧಗಳನ್ನು ಎಸಗಿರುವವರು ಸೇರಿದಂತೆ ಒಟ್ಟಾರೆ 538 ಅಕ್ರಮ ವಲಸಿಗ ಕ್ರಿಮಿನಲ್ ಗಳನ್ನು ಟ್ರಂಪ್ ಆಡಳಿತವು ಬಂಧಿಸಿದೆ. ಇದಲ್ಲದೇ ಹಲವಾರು ವಲಸಿಗರನ್ನು ಮಿಲಿಟರಿ ವಿಮಾನದ ಮೂಲಕ ಗಡೀಪಾರು ಮಾಡಲಾಗಿದೆ. ಇದು ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಗಡೀಪಾರು ಕಾರ್ಯಾಚರಣೆಯ ಆರಂಭಿಕ ಹಂತವಾಗಿದೆ. ಆಶ್ವಾಸನೆ ನೀಡಿದ್ದೇವೆ, ಅದರಂತೆಯೇ ನಡೆದುಕೊಳ್ಳುತ್ತಿದ್ದೇವೆ” ಎಂದೂ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೀವಿಟ್ ನುಡಿದಿದ್ದಾರೆ. ಜೊತೆಗೆ, ಇದು ನಮ್ಮ ದೇಶದ ಗಡಿಗಳನ್ನು ರಕ್ಷಿಸಿಕೊಳ್ಳುವ ಟ್ರಂಪ್ ಆಡಳಿತದ ಕೆಲಸದ ಸಣ್ಣ ಟ್ರೇಲರ್ ಅಷ್ಟೇ ಎಂದೂ ಅವರು ಹೇಳಿದ್ದಾರೆ.
ಟ್ರಂಪ್ ಅಧಿಕಾರ ವಹಿಸಿಕೊಂಡ ದಿನವೇ ಹಲವು ಮಹತ್ವದ ಆದೇಶಗಳಿಗೆ ಸಹಿ ಹಾಕಿದ್ದರು. ಅದರಲ್ಲಿ ಅಕ್ರಮ ವಲಸಿಗರ ಗಡೀಪಾರು ಕೂಡ ಒಂದು. ಅತಿಕ್ರಮಣದಿಂದ ಅಮೆರಿಕನ್ನರನ್ನು ರಕ್ಷಿಸುವುದೇ ನನ್ನ ಗುರಿ ಎಂದು ಟ್ರಂಪ್ ಹೇಳಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ, ಅಮೆರಿಕವು ಅಕ್ರಮ ವಲಸಿಗರ ಮಹಾಪೂರಕ್ಕೆ ಸಾಕ್ಷಿಯಾಗಿತ್ತು. ಲಕ್ಷಾಂತರ ಅಕ್ರಮ ಏಲಿಯನ್‌ಗಳು(ಅನ್ಯಗ್ರಹ ಜೀವಿಗಳು) ನಮ್ಮ ಗಡಿಗಳಲ್ಲಿ ಒಳನುಸುಳಿದ್ದಾರೆ.
ಇನ್ನೂ ಕೆಲವರು ವಾಣಿಜ್ಯ ವಿಮಾನಗಳ ಮೂಲಕ ನೇರವಾಗಿ ದೇಶದೊಳಕ್ಕೆ ಬಂದಿದ್ದಾರೆ. ಇಂಥ ಅನ್ಯಗ್ರಹ ಜೀವಿ(ಅಕ್ರಮ ವಲಸಿಗರು)ಗಳನ್ನು ಹೊರಗಟ್ಟುವುದೇ ನನ್ನ ಮೊದಲ ಕೆಲಸ ಎಂದು ಟ್ರಂಪ್ ಹೇಳಿದ್ದರು. ಈ ವಲಸಿಗರು ದೇಶದ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿ. ಇವರ ಅಮಾಯಕ ಅಮೆರಿಕನ್ನರ ವಿರುದ್ಧ ಹೀನ ಅಪರಾಧಗಳನ್ನು ಎಸಗುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದರು.