ಬೆಂಗಳೂರು: ರಾಜ್ಯದಲ್ಲಿ ಹಿಂದೆ ಆಪರೇಷನ್ ಕಮಲ ದೊಡ್ಡ ಸದ್ದು ಮಾಡಿತ್ತು. ಈಗ ಆಪರೇಷನ್ ಕಾಂಗ್ರೆಸ್ ನ ಆತಂಕ ಶುರುವಾಗಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ನೀಡಿರುವ ಹೇಳಿಕೆಯೊಂದು ಇದಕ್ಕೆ ಪುಷ್ಠಿ ನೀಡುವಂತಿದೆ.
ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿರುವ 60 ಪರ್ಸೆಂಟ್ ಲಂಚದ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಕುಮಾರಸ್ವಾಮಿ ಹಾಗೂ ಅವರ ಪಕ್ಷಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಇದರಿಂದಾಗಿ ಅವರ ಪಕ್ಷದ ಅಸ್ತಿತ್ವಕ್ಕೆ ದೊಡ್ಡ ಧಕ್ಕೆಯಾಗಿದೆ. ಹೀಗಾಗಿ ಕುಮಾರಸ್ವಾಮಿ ಹತಾಶೆಯಲ್ಲಿದ್ದಾರೆ. ಸಂಕ್ರಾಂತಿ ನಂತರ ಅವರ ಪಕ್ಷದಲ್ಲಿ ಎಷ್ಟು ಜನ ಶಾಸಕರು ಉಳಿಯುತ್ತಾರೆ ಎಂಬುವುದನ್ನು ನೋಡೋಣ ಎಂದು ಹೇಳಿದ್ದಾರೆ. ಇದು ಆಪರೇಷನ್ ಕಾಂಗ್ರೆಸ್ ನಡೆಯುತ್ತದೆಯೇ? ಎಂಬ ಆತಂಕ ಹಾಗೂ ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.
ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಸಾಕ್ಷಿಗಳಿದ್ದರೆ ಕೊಡಲಿ. ಹಿಂದೆ ಕೆಂಪಣ್ಣ ದೂರು ನೀಡಿದ್ದರು. ಅದಕ್ಕೆ ನಾವು ಆರೋಪ ಮಾಡಿದ್ದೇವೆ. ಇವರ ಆರೋಪಕ್ಕೆ ಸಾಕ್ಷಿ ಕೊಡಲಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿಲ್ಲ. ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ಅಭಿವೃದ್ಧಿಗೂ ಇದೆ, ಗ್ಯಾರೆಂಟಿಗೂ ಹಣ ಇದೆ. ಹಿಂದಿನ ಸರ್ಕಾರ ಆರ್ಥಿಕ ಶಿಸ್ತನ್ನು ಮೀರಿ ಹೋಗಿತ್ತು. 70 ಸಾವಿರ ಕೋಟಿ ಸಾಲ ಮಾಡಿತ್ತು. ಪಿಡಬ್ಲ್ಯೂಡಿ, ರೂರಲ್ ಡೆವಲಪ್‌ಮೆಂಟ್ ನಲ್ಲಿ ಪೆಂಡಿಂಗ್ ಇದೆ. ಅವರು ಹಣ ಪೆಂಡಿಂಗ್ ಇಟ್ಟು ಹೋಗಿದ್ದರು. ನಮ್ಮ ಸಿಎಂ ಹಣಕಾಸು ವಿಚಾರದಲ್ಲಿ ಪರ್ಫೆಕ್ಟ್. ಹಣ ಹೊಂದಿಸುವುದು ಗೊತ್ತಿದೆ ಎಂದು ಹೇಳಿದ್ದಾರೆ.