ಕೋಝಿಕ್ಕೋಡು: ‘ಯಾವುದೇ ಭಾಷೆಯ ಸಾಹಿತ್ಯವು ಬೆಳೆಯಬೇಕಾದರೆ ಇತರ ಭಾಷೆಗಳ ಸಾಹಿತ್ಯದೊಂದಿಗೆ ಸಂಪರ್ಕ ಬೆಳೆಸುವುದು ಅತ್ಯಗತ್ಯ. ಎಂದು ಕೇರಳ ವಿಧಾನಸಭೆಯ ಕೋಝಿಕ್ಕೋಡು ಶಾಸಕರಾದ ತೋಟತ್ತಿಲ್ ರವೀಂದ್ರನ್ ಹೇಳಿದ್ದಾರೆ.
ಕೋಝಿಕ್ಕೋಡಿನ ಗೋಕುಲ ಗ್ರ್ಯಾಂಡ್‌ನಲ್ಲಿ ವರ್ಲ್ಡ್ ಮಲೆಯಾಳಿ ಕೌನ್ಸಿಲ್ ಏರ್ಪಡಿಸಿದ ಸಮಾರಂಭದಲ್ಲಿ ಕನ್ನಡ-ಮಲೆಯಾಳಗಳ ನಡುವೆ 38 ಮಹತ್ವದ ಕೃತಿಗಳನ್ನು ಅನುವಾದಿಸಿದ ಡಾ.ಪಾರ್ವತಿ ಜಿ.ಐತಾಳ್ ಅವರಿಗೆ ‘ಮಲೆಯಾಳ ಮಿತ್ರ ‘ ಪ್ರಶಸ್ತಿ ನೀಡಿ ಮಾತನಾಡಿದ ರವೀಂದ್ರನ್, ಒಂದು ಭಾಷೆಗೆ ಹೊಸ ಗಾಳಿ-ಹೊಸ ಬೆಳಕುಗಳನ್ನು ಕೊಡಲು ಸಾಧ್ಯವಾಗುವುದು ಅನುವಾದದ ಮೂಲಕ ಮಾತ್ರ. ಇಂಥ ಭಾಷಾ ಸೌಹಾರ್ದವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜಗತ್ತಿನಾದ್ಯಂತ 600 ಶಾಖೆಗಳಿರುವ ಮಲೆಯಾಳಿ ಕೌನ್ಸಿಲ್ ಅತ್ಯಂತ ಶ್ಲಾಘನೀಯವಾದ ಕೆಲಸ ಮಾಡುತ್ತಿದೆ’ ಎಂದು ಪ್ರಶಂಸಿಸಿದರು
ವೇದಿಕೆಯಲ್ಲಿ ವರ್ಲ್ಡ್ ಮಲೆಯಾಳಿ ಕೌನ್ಸಿಲ್‌ನ ಇಂಡಿಯಾ ರೀಜನಲ್ ಚೇರ್ ಮನ್ ಮೋಹನ್ ಬಿ.ನಾಯರ್, ಪ್ರೆಸಿಡೆಂಟ್ ಪದ್ಮ ಕುಮಾರ್, ಕಾರ್ಯದರ್ಶಿ ರಾಮಚಂದ್ರನ್ ಪೇರಂಬ್ರಾ, ಉಪಾಧ್ಯಕ್ಷೆ ಸಂಜಿತಾ ಕಮಾಲ್, ವಿಜಯಚಂದ್ರನ್ ಮತ್ತು ಆತಿಥೇಯರಾದ ಮಲಬಾರ್ ಪ್ರಾವಿನ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಾರ್ವತಿ ಐತಾಳ್ ಅವರಿಗೆ ಶಾಲು- ಫಲಕ ಮತ್ತು ನಗದು ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಸಭಾಕಾರ್ಯಕ್ರಮದ ನಂತರ ಕೋಝಿಕ್ಕೋಡಿನ ಯುವ ಸಿತಾರ್ ವಾದಕ ಇಬ್ರಾಹಿ ಅವರಿಂದ ಸಿತಾರ್‌ವಾದನ, ಚಿತ್ರಗೀತೆಗಳ ಗಾಯಕಿ ಸಿಬೆಲ್ಲೋ ಸದಾನಂದ ಅವರಿಂದ ಗಾಯನ ಮತ್ತು ತಿರುವನಂತಪುರದ ನಾಟ್ಯವೇದ ಪರ್ಫಾರ್ಮಿಂಗ್ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿನಿಯರಿಂದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನಗೊಂಡವು.
ಇದನ್ನೂ ಓದಿ; ವಿಶ್ವಕಪ್ ಹೀರೋಯಿನ್ ರಿಚಾ ಘೋಷ್‌ಗೆ DSP ಹುದ್ದೆ ‘ಬಂಗ ಭೂಷಣ’ ಗೌರವ, ಬಹುಮಾನಗಳ ಸುರಿಮಳೆ



















