ಪ್ರಯಾಗ್‌ರಾಜ್: ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಫೆಬ್ರವರಿ 26ರಂದು ಸಂಪನ್ನಗೊಳ್ಳಲಿದ್ದು, ಇನ್ನು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿವೆ. ಕುಂಭಮೇಳ ಶೀಘ್ರದಲ್ಲೇ ಕೊನೆಗೊಳ್ಳುತ್ತಿರುವುದರಿಂದ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ದೇಶದ ಮೂಲೆ ಮೂಲೆಗಳಿಂದಲೂ ಭಕ್ತರ ದೊಡ್ಡ ಹಿಂಡೇ ಪ್ರತಿದಿನ ಪ್ರಯಾಗ್‌ರಾಜ್ ಕಡೆಗೆ ಆಗಮಿಸುತ್ತಿದೆ. ಸ್ವಂತ ವಾಹನಗಳು, ಟಿಟಿಗಳು, ರೈಲು, ವಿಮಾನ ಹೀಗೆ ಸಿಕ್ಕ ಸಿಕ್ಕ ವಾಹನಗಳನ್ನೇರಿ ಭಕ್ತಾದಿಗಳು ಕುಂಭಮೇಳಕ್ಕೆ ಧಾವಿಸುತ್ತಿದ್ದಾರೆ.
ಈ ಬಾರಿಯ ಕುಂಭಮೇಳದಲ್ಲಿ ನಿರೀಕ್ಷೆಗೂ ಮೀರಿ ಅಂದರೆ ಈವರೆಗೆ 60 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಮಹಾಕುಂಭ ಮೇಳ ಪ್ರಾರಂಭವಾದಾಗ, ಒಟ್ಟಾರೆ 45 ಕೋಟಿ ಜನರು ಬರುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿತ್ತು. ಆದರೆ, ಕುಂಭ ಮುಗಿಯಲು 3 ದಿನಗಳಿರುವಾಗಲೇ ನಿರೀಕ್ಷೆ ಮೀರಿ ಈ ಸಂಖ್ಯೆ 60 ಕೋಟಿ ದಾಟಿದೆ.
65 ಕೋಟಿ ದಾಟುವ ನಿರೀಕ್ಷೆ
ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ, ಫೆಬ್ರವರಿ 26 ರಂದು ಅಂತಿಮ ‘ಅಮೃತ ಸ್ನಾನ’ ನಡೆಯಲಿದ್ದು, ಆ ವೇಳೆಗೆ ಭಕ್ತರ ಸಂಖ್ಯೆ 65 ಕೋಟಿ ದಾಟುವ ನಿರೀಕ್ಷೆಯಿದೆ. ಅಂದರೆ, ಭಾರತದ 110 ಕೋಟಿ ಸನಾತನ ಅನುಯಾಯಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದಂತಾಗಲಿದೆ ಎಂದು ಸರ್ಕಾರ ಹೇಳಿದೆ. ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭ ಮೇಳವು ಮಹಾ ಶಿವರಾತ್ರಿಯ ದಿನವಾದ ಫೆಬ್ರವರಿ 26 ರವರೆಗೆ ನಡೆಯಲಿದೆ.
ವಿಶ್ವ ಜನಸಂಖ್ಯೆಯ ಪರಾಮರ್ಶೆ ನಡೆಸುವ ಪ್ಯೂ ರಿಸರ್ಚ್ ಪ್ರಕಾರ, ಭಾರತದ ಜನಸಂಖ್ಯೆ ಸರಿಸುಮಾರು 143 ಕೋಟಿ (1.43 ಬಿಲಿಯನ್). ಈ ಪೈಕಿ 110 ಕೋಟಿ (1.10 ಬಿಲಿಯನ್) ಜನರು ಸನಾತನ ಧರ್ಮದ ಅನುಯಾಯಿಗಳಾಗಿದ್ದಾರೆ. ಹೀಗಾಗಿ ಭಾರತದ ಜನಸಂಖ್ಯೆಯ ಶೇಕಡಾ 55 ಕ್ಕಿಂತ ಹೆಚ್ಚು ಜನರು ಮಹಾ ಕುಂಭದಲ್ಲಿ ಭಾಗವಹಿಸಿದಂತಾಗಿದೆ.
ಪ್ಯೂ ರಿಸರ್ಚ್ 2024 ರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಸನಾತನ ಅನುಯಾಯಿಗಳ ಸಂಖ್ಯೆ 120 ಕೋಟಿ. ಅಂದರೆ ವಿಶ್ವಾದ್ಯಂತತ ಶೇಕಡಾ 50ಕ್ಕೂ ಹೆಚ್ಚು ಸನಾತನಿಗಳು ಸಂಗಮದಲ್ಲಿ ಮಿಂದಂತಾಗಿದೆ. ಮುಂಬರುವ ಮಹಾ ಶಿವರಾತ್ರಿಯ ದಿನ ಪುಣ್ಯ ಸ್ನಾನದಲ್ಲಿ ಮತ್ತಷ್ಟು ಜನರು ಭಾಗವಹಿಸಲಿದ್ದು, ಪುಣ್ಯಸ್ನಾನಗೈದವರ ಸಂಖ್ಯೆಯು 65 ಕೋಟಿ ಮೀರುವ ನಿರೀಕ್ಷೆಯಿದೆ. ಇದೇ ವೇಳೆ, ಜಾನಕಿಯ (ಸೀತಾ ದೇವಿ) ತವರಾದ ನೇಪಾಳದಿಂದ 50 ಲಕ್ಷಕ್ಕೂ ಹೆಚ್ಚು ಜನರು ಕುಂಭಮೇಳಕ್ಕೆ ಆಗಮಿಸಿ ಈ ವರ್ಷ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.

ಮೌನಿ ಅಮಾವಾಸ್ಯೆಯಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪುಣ್ಯ ಸ್ನಾನ ಮಾಡಿದ್ದು, ಅಂದು ಒಂದೇ ದಿನ ಸುಮಾರು 8 ಕೋಟಿ ಮಂದಿ ಪವಿತ್ರ ಸ್ನಾನದಲ್ಲಿ ಭಾಗವಹಿಸಿದ್ದರು. ಮಕರ ಸಂಕ್ರಾಂತಿಯಂದು ಸುಮಾರು 3.5 ಕೋಟಿ ಭಕ್ತರು ಅಮೃತ ಸ್ನಾನ ಮಾಡಿದ್ದರು.
ತ್ರಿವೇಣಿ ಸಂಗಮದಲ್ಲಿ ಜೆ.ಪಿ.ನಡ್ಡಾ ಸ್ನಾನ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅವರ ಕುಟುಂಬ ಶನಿವಾರ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದ್ದಾರೆ. ನಡ್ಡಾ ಅವರಷ್ಟೇ ಅಲ್ಲದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಸಂಪುಟ ಸಚಿವರಾದ ಸ್ವತಂತ್ರ ದೇವ್ ಸಿಂಗ್ ಮತ್ತು ನಂದ ಗೋಪಾಲ್ ಗುಪ್ತಾ ಕೂಡ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.