ನವದೆಹಲಿ: ಕಾಶ್ಮೀರದ ಆರ್ಥಿಕತೆ ಹಾಳು ಮಾಡುವುದು ಉಗ್ರರ ಉದ್ದೇಶವಾಗಿತ್ತು. ಬೈಸರನ್‌ನಲ್ಲಿ ಕಾಶ್ಮೀರಿ ಜನರು ಪ್ರವಾಸಿಗರು ಹೇಗೆ ಜೀವ ಉಳಿಸಿಕೊಂಡರೆಂದು ಎಲ್ಲರೂ ನೋಡಿದ್ದಾರೆ. ವಿಪಕ್ಷಗಳು ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿತ್ತು. ಆದರೆ ಈವರೆಗೂ ಈ ಭಯೋತ್ಪಾದಕರನ್ನು ಬಂಧಿಸಲು ಸಾಧ್ಯವಾಗಿಲ್ಲ. ಘಟನೆ ನಡೆದು ನೂರು ದಿನಗಳ ಕಳೆದರೂ ಅವರು ನುಸುಳಿದ್ದು ಹೇಗೆ ಎನ್ನುವುದು ಗೊತ್ತಿಲ್ಲ. ಅವರು ಯಾರೆಂದೂ ಗೊತ್ತಿಲ್ಲ. ಉಗ್ರರು ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶಕ್ಕೆ ಬಂದಿದ್ದು ಹೇಗೆಂದು ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ ಅಂತ ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್ ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಪರೇಷನ್ ಸಿಂಧೂರ್ ದಾಳಿಯನ್ನು ಪ್ರತಿಪಾದಿಸಿಕೊಂಡ ರಾಜನಾಥ್ ಸಿಂಗ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಇದು ಯಾವ ರೀತಿಯ ಭದ್ರತೆ? ಕಾಶ್ಮೀರಕ್ಕೆ ಜನರು ಬನ್ನಿ ಎಂದು ಸರ್ಕಾರ ಹೇಳುತ್ತದೆ. ಆದರೆ ಬೈಸರನ್‌ನಲ್ಲಿ ಏನಾಯಿತು, ಒಂದು ಅಂಬುಲೆನ್ಸ್ ಬರುವುದಕ್ಕೆ ಗಂಟೆಯಾಯಿತು ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಚರ್ಚೆ ವೇಳೆ ಮಾತನಾಡಿದ ಗೊಗೊಯ್, ವಿಪಕ್ಷಗಳು ಸಂಪೂರ್ಣ ಸಹಕಾರ ನೀಡಿದರೂ ಉಗ್ರರನ್ನು ಬಂಧಿಸಲು ಸಾಧ್ಯವಾಗಿಲ್ಲ. ಜಮ್ಮು ಕಾಶ್ಮೀರ ದಾಳಿಯ ನೈತಿಕ ಹೊಣೆಯನ್ನು ಅಮಿತ್ ಶಾ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಕ್ಷಣಾ ಸಚಿವರಾಗಿ ರಾಜನಾಥ್ ಸಿಂಗ್ ಎಲ್ಲ ಮಾಹಿತಿ ನೀಡಿದರು. ಆದರೆ ಕಾಶ್ಮೀರದ ಬೈಸರನ್‌ಗೆ ಭಯೋತ್ಪಾದಕರು ಹೇಗೆ ಬಂದರು ಎನ್ನುವುದಕ್ಕೆ ಉತ್ತರವನ್ನೇ ಕೊಡಲಿಲ್ಲ. ನಾವು ವಿಪಕ್ಷವಾಗಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇವೆ. ಆ ಭಯೋತ್ಪಾದಕರು ಅಂದು ಹೇಗೆ ಒಳಗೆ ನುಸುಳಿದರೆಂದು ಪ್ರಶ್ನೆ ಮಾಡಿದ್ದಾರೆ.
ಬೈಸರನ್‌ಗೆ ಹೋಗಿದ್ದು ರಾಹುಲ್ ಗಾಂಧಿ ಮಾತ್ರ :
ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ದುರಹಂಕಾರ ಬಂದಿದೆ. ಇಲ್ಲಿ ಯಾರು ಪ್ರಶ್ನೆ ಮಾಡಲ್ಲ ಎನ್ನುವ ಅಹಂಕಾರ ಇದೆ. ನಾವು ವಿರೋಧ ಪಕ್ಷಗಳು ಪ್ರಶ್ನೆ ಕೇಳುತ್ತೇವೆ. ಪ್ರಧಾನಿ ಮೋದಿ ಬೈಸರನ್‌ಗೆ ಹೋಗಲಿಲ್ಲ, ಬಿಹಾರಕ್ಕೆ ಚುನಾವಣೆ ಪ್ರಚಾರಕ್ಕೆ ಹೊದರು. ಬೈಸರನ್‌ಗೆ ಹೊಗಿದ್ದು ರಾಹುಲ್ ಗಾಂಧಿ ಮಾತ್ರ ಎಂದು ಕೇಂದ್ರ ಸರ್ಕಾರಕ್ಕೆ ಕಟುವಾಗಿ ಕುಟುಕಿದ್ದಾರೆ.



















