ಬೆಂಗಳೂರು: ಡಿಜಿಟಲ್ ಯುಗದಲ್ಲಿ ಹೂಡಿಕೆ, ಹಣ ಪಾವತಿ, ಬಿಲ್ ಪೇಮೆಂಟ್ ಸೇರಿ ಯಾವುದೇ ವಹಿವಾಟು ಅತ್ಯಂತ ಸುಲಭವಾಗಿದೆ. ಮನೆಯಲ್ಲಿಯೇ ಕುಳಿತು ಈಗ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಹಾಗೆ ಹೂಡಿಕೆ ಮಾಡಿದ ಹಣವನ್ನು ರಿಟರ್ನ್ಸ್ ಸಮೇತ ವಿತ್ ಡ್ರಾ ಮಾಡಬಹುದಾಗಿದೆ. ಅಷ್ಟರಮಟ್ಟಿಗೆ ಈಗ ಎಲ್ಲವೂ ಡಿಜಿಟಲ್ ಮಯವಾಗಿದೆ. ಅದರಲ್ಲೂ, ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಅಥವಾ ಎಫ್ ಡಿಯನ್ನು ಕೂಡ ಆನ್ ಲೈನ್ ಮೂಲಕ ಮಾಡಬಹುದಾಗಿದೆ. ಆದರೆ, ಕೆಲವರಿಗೆ ಆನ್ ಲೈನ್ ಮೂಲಕ ಎಫ್ ಡಿ ಮಾಡಬೇಕೋ, ಆಫ್ ಲೈನ್ ಮೂಲಕ ಹೂಡಿಕೆ ಮಾಡಬೇಕೋ ಎಂಬ ಗೊಂದಲ ಇರುತ್ತದೆ. ಯಾವುದು ಬೆಸ್ಟ್ ಎಂಬುದರ ಮಾಹಿತಿ ಇಲ್ಲಿದೆ.
- ಆನ್ ಲೈನ್ ಮೂಲಕ ಎಫ್ ಡಿ ಮಾಡಿದರೆ, ಬ್ಯಾಂಕುಗಳಿಗ ಅಲೆಯುವ, ದಾಖಲೆ ನೀಡುವ ಗೋಜಿರುವುದಿಲ್ಲ
- ಆಫ್ ಲೈನ್ ಮೂಲಕ ಅಂದರೆ, ಬ್ಯಾಂಕ್ ಸಿಬ್ಬಂದಿ ಜತೆ ನೇರವಾಗಿ ಮಾತನಾಡಿ, ಎಲ್ಲ ಅನುಮಾನಗಳನ್ನು ಬಗೆಹರಿಸಿಕೊಂಡು ಹೂಡಿಕೆ ಮಾಡಬಹುದು.
- ಆನ್ ಲೈನ್ ಎಫ್ ಡಿ ಮಾಡಲು, ನಿಮಗೆ ಆ ಬ್ಯಾಂಕಿನಲ್ಲಿ ಖಾತೆ ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಕಡ್ಡಾಯವಾಗಿ ಬೇಕು. ನೀವು ಕನಿಷ್ಠ ಒಂದು ಸಾವಿರ ರೂ.ದಿಂದಲೂ ಹೂಡಿಕೆ ಆರಂಭಿಸಬಹುದು.
- ವೈಯಕ್ತಿಕ ಮಾರ್ಗದರ್ಶನ ಬೇಕು, ಬ್ಯಾಂಕ್ ಸಿಬ್ಬಂದಿ ಜತೆ ಮಾತನಾಡಿ ವಿವರ ತಿಳಿದುಕೊಳ್ಳಬೇಕು ಮತ್ತು ಕೈಯಲ್ಲಿ ಭೌತಿಕ ದಾಖಲೆಗಳಿದ್ದರೆನೇ ಸಮಾಧಾನ ಎನ್ನುವವರಾದರೆ, ಆಫ್ ಲೈನ್ ಎಫ್ ಡಿಯನ್ನು ಆರಿಸಿಕೊಳ್ಳಬಹುದು
- ಆಫ್ ಲೈನ್ ಎಫ್ ಡಿ ಮಾಡಲು ನೀವು ಶಾಖೆಗೆ ಭೇಟಿ ನೀಡಬೇಕು. ಇಲ್ಲಿ ಕನಿಷ್ಠ ಹೂಡಿಕೆಯ ಮೊತ್ತವು ಸಾಮಾನ್ಯವಾಗಿ 5,000 ರೂ. ಅಥವಾ 10,000 ರೂ. ಇರುತ್ತದೆ.
- ಆಫ್ ಲೈನ್ ಎಫ್ ಡಿಗಳಿಗೆ ಹೋಲಿಸಿದರೆ, ಕೆಲವು ಬ್ಯಾಂಕುಗಳು ಆನ್ ಲೈನ್ ಎಫ್ ಡಿಗಳಿಗೆ ಸ್ವಲ್ಪ ಹೆಚ್ಚಿನ ಬಡ್ಡಿ ನೀಡುತ್ತವೆ. ಯಾಕೆಂದರೆ, ಅವರಿಗೆ ಆನ್ ಲೈನ್ನಲ್ಲಿ ನಿರ್ವಹಣಾ ವೆಚ್ಚ ಕಡಿಮೆ. ಇದು ಗ್ರಾಹಕರಿಗೆ ಹೆಚ್ಚು ಅನುಕೂಲ
ಹೀಗೆ, ಆನ್ ಲೈನ್ ಹಾಗೂ ಆಫ್ ಲೈನ್ ಎಫ್ ಡಿ ಹೂಡಿಕೆಗಳಿಗೆ ಹಲವು ವ್ಯತ್ಯಾಸಗಳಿವೆ. ನಾವು ಡಿಜಿಟಲ್ ವ್ಯವಸ್ಥೆಯ ಭಾಗವಾಗಿದ್ದೇವೆ, ನಮಗೆ ಬ್ಯಾಂಕ್ ಗಳಿಗೆ ತಿರುಗಾಡಲು ಆಗೋದಿಲ್ಲ ಎನ್ನುವವರಿಗೆ ಆನ್ ಲೈನ್ ಎಫ್ ಡಿ ಬೆಸ್ಟ್. ಇನ್ನು, ಬ್ಯಾಂಕ್ ಗೆ ಹೋದರೇನೇ ಸಮಾಧಾನ, ಅಲ್ಲಿ ಹೆಚ್ಚು ಮಾಹಿತಿ ಸಿಗತ್ತೆ ಅನ್ನೋರಿಗೆ ಆಫ್ ಲೈನ್ ಎಫ್ ಡಿ ಬೆಸ್ಟ್.