ಬೆಂಗಳೂರು: ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಿವೆ. ಇದರಿಂದಾಗಿ ಸಾಮಾನ್ಯ ಜನರು ಬದಕಲು ಕಷ್ಟ ಪಡುವಂತಾಗುತ್ತಿದೆ. ಇತ್ತೀಚೆಗಷ್ಟೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಇಳಿಕೆ ಕಂಡಿದ್ದ ಈರುಳ್ಳಿ ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ.
ಕೆಜಿಗೆ 50 ರೂ. ನಷ್ಟಿದ್ದ ಈರುಳ್ಳಿ ಬೆಲೆ ಈಗ ಮತ್ತೆ 60 ರೂ.ನಿಂದ 80ರ ಆಸುಪಾಸಿಗೆ ಏರಿಕೆಯಾಗಿದ್ದು, ಕೆಲವೇ ದಿನಗಳಲ್ಲಿ ನೂರರ ಗಡಿ ದಾಟಲಿದೆ ಎನ್ನಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷೆಯ ಪ್ರಮಾಣದಲ್ಲಿ ಮಾರುಕಟ್ಟೆಗೆ ಈರುಳ್ಳಿ ಬಂದಿಲ್ಲ. ಹೀಗಾಗಿ ಈರುಳ್ಳಿಯನ್ನು ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.
ಆದರೆ, ಸಣ್ಣಪುಟ್ಟ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟ ದರ 90 ರೂ. ಆಗಿದೆ. ಮುಂದಿನ ದಿನಗಳಲ್ಲಿ 100 ರ ಗಡಿದಾಟುವ ಸಾಧ್ಯತೆಗಳಿವೆ.