ದುಬೈ: ಭಾರತ ತಂಡ, ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕೆ ಇಳಿಯಿದೆ. ಈ ಗೆಲುವಿನ ಮೂಲಕ ಸೆಮಿ ಫೈನಲ್ಗೇರುವ ಗುರಿಯನ್ನು ಹೊಂದಿದೆ. ನ್ಯೂಜಿಲೆಂಡ್ ವಿರುದ್ಧ ಈಗಾಗಲೇ ತನ್ನ ಮೊದಲನೇ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡ, ನಾಕ್‌ಔಟ್ ಹಂತವನ್ನು ಜೀವಂತವಾಗಿರಿಸಿಕೊಳ್ಳುವುದಕ್ಕೆ ಭಾರತದ ಎದುರು ಗೆಲ್ಲಲೇಬೇಕಾಗಿದೆ.
ಈ ಪಂದ್ಯಕ್ಕಾಗಿ ಎರಡೂ ತಂಡಗಳು ಪ್ಲೇಯಿಂಗ್ ಇಲೆವೆನ್ ಆಯ್ಕೆ ವೇಳೆ ಹೆಚ್ಚು ಜಾಗರೂಕತೆ ವಹಿಸಲಿದೆ. ಆದಾಗ್ಯೂ ಭಾರತ ತಂಡದಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಬಾಂಗ್ಲಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಇಬ್ಬರು ಸ್ಪಿನ್ ಆಲ್‌ರೌಂಡರ್‌ಗಳು ಹಾಗೂ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವರನ್ನು ಆಡಿಸಲಾಗಿತ್ತು. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ 5 ವಿಕೆಟ್ ಸಾಧನೆ ಮಾಡಿದ್ದರೆ, ಬ್ಯಾಟಿಂಗ್‌ನಲ್ಲಿ ಶುಭಮನ್ ಗಿಲ್ ಶತಕ ಸಿಡಿಸಿ ಮಿಂಚಿದ್ದರು. ಅವರಿಬ್ಬರೂ ಭಾರತ ತಂಡದ ಗೆಲುವಿನ ರೂವಾರಿಗಳು ಎನಿಸಿಕೊಂಡಿದ್ದರು. ಇನ್ನು ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರಿರಲಿಲ್ಲ. ಆದಾಗ್ಯೂ ಪಾಕ್ ವಿರುದ್ಧ ಈ ಆಟಗಾರರ ಸ್ಥಾನ ಖಚಿತ.
ಕೆಳ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಸೀಮ್ ಬೌಲಿಂಗ್ ಆಲ್‌ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಪಿನ್ ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಆಡಲಿದ್ದಾರೆ.
ಕುಲ್ದೀಪ್ ಯಾದವ್ ಸ್ಥಾನಕ್ಕೆ ವರುಣ್ ಚಕ್ರವರ್ತಿ
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ನಿರೀಕ್ಷೆ ಮಾಡಬಹುದಾಗಿದೆ. ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಸ್ಥಾನಕ್ಕೆ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಬರಬಹುದು. ಪಾಕ್ ಆಟಗಾರರಿಗೆ ವರುಣ್ ಹೊಸಬರು. ಹೀಗಾಗಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ ಹಾಗೂ ಮೊಹಮ್ಮದ್ ಶಮಿ ಆಡಲಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ಮೊಹಮ್ಮದ್ ಶಮಿ.