ಇಂಗ್ಲೆಂಡ್ ಕ್ರಿಕೆಟ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಒಂದೇ ಎಸೆತದಲ್ಲಿ ಮೂರು ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ತಂಡ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಸರಣಿಯ ಮೊದಲ ಪಂದ್ಯ ಲಾರ್ಡ್ಸ್‌ನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡದ ವಿರುದ್ಧ ಇನ್ನಿಂಗ್ಸ್ ಹಾಗೂ ಹಾಗೂ 114 ರನ್ ಗಳಿಂದ ಗೆಲುವು ಕಂಡಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಗೆ ವಿದಾಯ ಹೇಳಿದೆ.
2003 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆಂಡರ್ಸನ್ 700 ಟೆಸ್ಟ್ ವಿಕೆಟ್ ಗಳೊಂದಿಗೆ ವಿದಾಯ ಹೇಳಿದ್ದಾರೆ. ಈ ವಿಶೇಷ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ವಿಶೇಷ ಶತಕ, ದ್ವಿಶತಕ ಹಾಗೂ ತ್ರಿಶತಕ ಪೂರೈಸಿದ್ದಾರೆ. ಬೆನ್ ಸ್ಟೋಕ್ಸ್ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಅವರು ತಮ್ಮ ಮೊದಲ ಓವರ್‌ನಲ್ಲಿ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿ ವಿಕೆಟ್ ಪಡೆದರು. ಇದರೊಂದಿಗೆ ಅವರು ವಿಶೇಷ ಶತಕ, ದ್ವಿಶತಕ ಮತ್ತು ತ್ರಿಶತಕವನ್ನು ಪೂರ್ಣಗೊಳಿಸಿದರು.
ಇದು ಬೆನ್ ಸ್ಟೋಕ್ಸ್ ಅವರ 200 ನೇ ಟೆಸ್ಟ್ ವಿಕೆಟ್ ಆಗಿದ್ದರೆ, ಇಂಗ್ಲೆಂಡ್ ನಲ್ಲಿ ಅವರ 100 ನೇ ಟೆಸ್ಟ್ ವಿಕೆಟ್ ಆಗಿದೆ. ಅಷ್ಟೇ ಅಲ್ಲದೆ ಈ ವಿಕೆಟ್‌ನೊಂದಿಗೆ ಬೆನ್ ಸ್ಟೋಕ್ಸ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 300 ವಿಕೆಟ್ ಗಳನ್ನು ಪೂರೈಸಿದ ದಾಖಲೆ ಬರೆದಿದ್ದಾರೆ. ಅಂದರೆ ಬೆನ್ ಸ್ಟೋಕ್ಸ್ ಕೇವಲ ಒಂದು ವಿಕೆಟ್‌ನೊಂದಿಗೆ ಈ ಮೂರು ವಿಶೇಷ ಸಾಧನೆ ಮಾಡಿದ್ದಾರೆ.

ಬೆನ್ ಸ್ಟೋಕ್ಸ್‌ಗೆ ಕಿರ್ಕ್ ಮೆಕೆಂಜಿ ವಿಕೆಟ್ ತುಂಬಾ ವಿಶೇಷವಾಗಿತ್ತು. ಈ ವಿಕೆಟ್‌ನೊಂದಿಗೆ, ಅವರು ವೆಸ್ಟ್ ಇಂಡೀಸ್ ಶ್ರೇಷ್ಠ ಬೌಲರ್ ಗ್ಯಾರಿ ಸೋಬರ್ಸ್ ಮತ್ತು ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್-ರೌಂಡರ್ ಜಾಕ್ವೆಸ್ ಕಾಲಿಸ್ ವಿಶೇಷ ಕ್ಲಬ್‌ನಲ್ಲಿ ತಮ್ಮ ಹೆಸರು ಸೇರಿಸಿದರು.
ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ ಒಟ್ಟು 103 ಟೆಸ್ಟ್ ಗಳನ್ನು ಆಡಿದ್ದು, 200ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್ನಲ್ಲೂ ಮ್ಯಾಜಿಕ್ ಮಾಡಿರುವ ಸ್ಟೋಕ್ಸ್ 35.30 ರ ಸರಾಸರಿಯಲ್ಲಿ 6,320 ರನ್ ಬಾರಿಸಿದ್ದಾರೆ. 13 ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.