ಶಿವಮೊಗ್ಗ: ಮತ್ತೊಂದು ಬಾರಿಗೆ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರೆಯುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B.Y. Vijayendra) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಚುನಾವಣೆಗಿದ್ದ ಪೈಪೋಟಿಯಂತೆ ರಾಜ್ಯಾಧ್ಯಕ್ಷ ಹುದ್ದೆಗೂ ಪೈಪೋಟಿ ಇದೆ. ಕೇಂದ್ರ ವರಿಷ್ಠರು ಪ್ರತಿಯೊಂದನ್ನೂ ಗಮನಿಸುತ್ತಿದ್ದಾರೆ. ನಾನೇ ಮತ್ತೆ ಮುಂದುವರೆಯುವ ವಿಶ್ವಾಸವಿದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ(Democratic system) ಇದೆ. ಹೀಗಾಗಿ ಎಲ್ಲ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುತ್ತವೆ. ವ್ಯವಸ್ಥಿತ ಸಂಘಟನೆ, ಚುನಾವಣೆ ನಡೆಯುವುದು ಬಿಜೆಪಿಯಲ್ಲಿ ಮಾತ್ರ. ಮಂಡಲ ಮಟ್ಟದಿಂದ ರಾಜ್ಯಮಟ್ಟದವರೆಗೂ ವ್ಯವಸ್ಥಿತವಾಗಿ ಚುನಾವಣೆ ನಡೆಯುತ್ತದೆ. ನಾನು ಅಧ್ಯಕ್ಷನಾಗಿ ಕೆಲಸ ಮಾಡಿದ ಕುರಿತು ಕಾರ್ಯಕರ್ತರಿಗೆ ಎಲ್ಲವೂ ಗೊತ್ತಿದೆ.
ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ. ಸರ್ಕಾರದ ಸಾಕಷ್ಟು ಹಗರಣಗಳನ್ನು ಬಯಲಿಗೆ ತಂದಿದ್ದೇವೆ. ಹೀಗಾಗಿ ಮತ್ತೆ ನಾನು ರಾಜ್ಯಾಧ್ಯಕ್ಷನಾಗಿ ಮುಂದುವರೆಯುವ ವಿಶ್ವಾಸ ನನಗಿದೆ ಎಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagowda Patil Yatnal) ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ಸದಾನಂದಗೌಡ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಅಂತಹ ಹೇಳಿಕೆಯಿಂದ ಏನೇನು ಡ್ಯಾಮೇಜ್ ಆಗಬೇಕೋ ಅವೆಲ್ಲ ಆಗಿಬಿಟ್ಟಿವೆ. ಒಂದು ವಾರದಲ್ಲಿ ಇವುಗಳಿಗೆ ಉತ್ತರ ಸಿಗಲಿದೆ. ಯಾರು ಅಧ್ಯಕ್ಷರಾಗುತ್ತಾರೆ ಎಂಬುವುದು ಸದ್ಯದಲ್ಲೇ ಹೊರ ಬೀಳಲಿದೆ. ಕಳೆದ ವರ್ಷದಿಂದ ನಾನು ಯಾರ ವಿರುದ್ಧವೂ ಬಹಿರಂಗ ಹೇಳಿಕೆ ನೀಡಿಲ್ಲ.
ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ. ದೊಡ್ಡ ಜವಾಬ್ದಾರಿಯನ್ನು ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.