ದಕ್ಷಿಣ ಕನ್ನಡ : ಅತೀ ವೇಗವಾಗಿ ಬಂದ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪಾದಚಾರಿಗಳ ಮೇಲೆ ಉರುಳಿ ಬಿದ್ದಿರುವ ಭೀಕರ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಡಬೈಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಜೀಪ್‌ನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಓಮ್ನಿ, ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಈ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಕೂದಲೆಳೆ ಅಂತರದಲ್ಲಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಮತ್ತೊಬ್ಬ ಮಹಿಳೆ ಪಲ್ಟಿಯಾದ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಕಾರಿನ ಅಡಿಯಲ್ಲಿ ಸಿಲುಕಿದ್ದ ಮಹಿಳೆಯನ್ನು ಹೊರತೆಗೆದು ತಕ್ಷಣವೇ ಆಟೋರಿಕ್ಷಾ ಮೂಲಕ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಇಡೀ ಘಟನೆಯ ಭಯಾನಕ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಬರ್ತ್‌ಡೇ ಸಲೆಬ್ರೆಷನ್ ವೇಳೆ ದುರಂತ.. ಕ್ಯಾಲಿಫೋರ್ನಿಯಾ ಜಲಪಾತದಲ್ಲಿ ಮುಳುಗಿ ಭಾರತೀಯ ಟೆಕ್ಕಿ ದುರ್ಮರಣ!


















