ಜಮ್ಮು-ಕಾಶ್ಮೀರದ ಸಿಎಂ ಆಗಿ ಒಮರ್ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿ ಜಯಗಳಿಸಿತ್ತು. 2009 ರಿಂದ 2014 ರವರೆಗೆ ಜಮ್ಮು ಮತ್ತು ಕಾಶ್ಮೀರ ಪೂರ್ಣ ಪ್ರಮಾಣದ ರಾಜ್ಯವಾಗಿದ್ದಾಗಲೂ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಒಮರ್ ಅಬ್ದುಲ್ಲಾ ಮೊದಲ ಅವಧಿಯಲ್ಲಿ ಆಡಳಿತ ನಡೆಸಿತ್ತು.
ಒಮರ್ ಅಬ್ದುಲ್ಲಾ ಅವರ ಮಂತ್ರಿ ಮಂಡಳಿಯು ಅವರನ್ನು ಒಳಗೊಂಡಂತೆ ಒಟ್ಟು 10 ಸದಸ್ಯರನ್ನು ಹೊಂದಿದೆ. ಸಕೀನಾ ಇಟ್ಟು, ಸೈಫುಲ್ಲಾ ಮಿರ್, ಅಬ್ದುಲ್ ರಹೀಮ್ ರಾಥರ್, ಅಲಿ ಮೊಹಮ್ಮದ್ ಸಾಗರ್, ಸುರಿಂದರ್ ಸಿಂಗ್, ಅಜಯ್ ಸಾಧೋತ್ರಾ, ಪಿರ್ಜಾದಾ ಮೊಹಮ್ಮದ್ ಸೈಯದ್ ಹಾಗೂ ಕೆಲವು ಸ್ವತಂತ್ರ ಸದಸ್ಯರು ಇದ್ದಾರೆ.
ರಾಜ್ಯದಲ್ಲಿನ 90 ಸ್ಥಾನಗಳಲ್ಲಿ ಎನ್‌ಸಿ 42 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಜನರಲ್ ಮನೋಜ್ ಸಿನ್ಹಾ ಪ್ರಮಾಣ ವಚನ ಬೋಧಿಸಲಿದ್ದಾರೆ.