ಬೆಂಗಳೂರು : ಇಂದು ದೇಶಾದ್ಯಂತ ಓಲಾ, ಉಬರ್ ಮತ್ತು ರ‍್ಯಾಪಿಡೋ ಆಪ್ ಆಧಾರಿತ ಟ್ಯಾಕ್ಸಿಗಳ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟನೆಗಳು ಈ ಮುಷ್ಕರಕ್ಕೆ ಕರೆ ನೀಡಿವೆ. ತೆಲಂಗಾಣದ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ ( TGPWU) ಮತ್ತು ಇತರ ಕಾರ್ಮಿಕ ಸಂಘಗಳ ಸಮನ್ವಯದಲ್ಲಿ ಮುಷ್ಕರಕ್ಕೆ ನಡೆಯುತ್ತಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ಇದಕ್ಕೆ ಬೆಂಬಲವಾಗಿ ಕರ್ನಾಟಕದಲ್ಲೂ ಸೇರಿದಂತೆ ದೇಶಾದ್ಯಂತ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಚಾಲಕರು ಸುಮಾರು ಆರು ಗಂಟೆಗಳ ಕಾಲ ತಮ್ಮ ಆ್ಯಪ್‌ಗಳನ್ನು ಆಫ್ ಮಾಡಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಮುಷ್ಕರದ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಲಾಗಿದ್ದು, TGPWU ಫೆಬ್ರವರಿ 7, 2026 ರಂದು ದೇಶಾದ್ಯಂತದ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು ʼಅಖಿಲ ಭಾರತ ಮುಷ್ಕರʼದಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದು, ಕನಿಷ್ಠ ದರಗಳ ಅನುಪಸ್ಥಿತಿ, ನಿಯಂತ್ರಣದ ಕೊರತೆ ಮತ್ತು ಕಾರ್ಮಿಕರ ಮೇಲಿನ ನಿರಂತರ ಶೋಷಣೆಯನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಲಾಗಿದೆ. ಸರ್ಕಾರದ ಯಾವುದೇ ಖಚಿತ ನಿಯಂತ್ರಣ ಮಾರ್ಗಸೂಚಿಗಳಿಲ್ಲದ ಕಾರಣ ಓಲಾ, ಉಬರ್, ರ‍್ಯಾಪಿಡೊ ಮತ್ತು ಪೋರ್ಟರ್‌ನಂತಹ ಕಂಪನಿಗಳು ಆಟೋಗಳು, ಕ್ಯಾಬ್‌ಗಳು ಮತ್ತು ಬೈಕ್ ಟ್ಯಾಕ್ಸಿಗಳಿಗೆ ದರವನ್ನು ತಾವೇ ನಿರ್ಧರಿಸುತ್ತಿವೆ. ಇದರಿಂದಾಗಿ ಚಾಲಕರು ಗಂಭೀರ ಆದಾಯ ಅಸ್ಥಿರತೆ, ಶೋಷಣೆ ಮತ್ತು ಸಮರ್ಥನೀಯವಲ್ಲದ ಹೆಚ್ಚುವರಿ ಸಮಯದ ಕೆಲಸದ ಪರಿಸ್ಥಿತಿಗಳಿಗೆ ಒಳಪಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಅಗ್ರಿಗೇಟರ್ ಕಂಪನಿಗಳು ಲಾಭ ಗಳಿಸುವುದನ್ನು ಮುಂದುವರೆಸಿದ್ದರೂ, ಲಕ್ಷಾಂತರ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಮತ್ತು ಬಡತನದ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ ಎಂದು ಒಕ್ಕೂಟ ಆರೋಪಿಸಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಸರ್ಕಾರ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೇಡಿಕೆಗಳೇನು ನೋಡೋದಾದ್ರೆ..?
- ಕನಿಷ್ಠ ಮೂಲ ದರ ಮತ್ತು ಸಾಮಾಜಿಕ ಭದ್ರತೆ ನೀಡಬೇಕು
- 2025ರ ಮೋಟರ್ ವಾಹನ ಅಗ್ರಿಗೇಟರ್ ಮಾರ್ಗಸೂಚಿ ಜಾರಿ ಮಾಡಬೇಕು
- ಕನಿಷ್ಠ ಮೂಲ ದರವನ್ನು ನಿರ್ಧರಿಸಬೇಕು
- ವಾಣಿಜ್ಯೇತರ ವಾಹನಗಳ ಬಳಕೆಯನ್ನು ನಿಷೇಧ
- ಕಮಿಷನ್ ಪದ್ಧತಿಯನ್ನು ನಿಯಂತ್ರಿಸಬೇಕು
ಇದನ್ನೂ ಓದಿ : ರೀಲ್ಸ್ ನೋಡ್ಕೊಂಡೇ ಬಸ್ ಚಾಲನೆ.. ಮಂಡ್ಯ KSRTC ಡ್ರೈವರ್ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ!


















