ಬೆಂಗಳೂರು: ಮುಸ್ಲಿಂರಿಗೆ ಮತದಾನದ ಹಕ್ಕು ನೀಡಬಾರದು ಎಂದು ಹೇಳಿಕೆ ನೀಡಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಯೊಂದು ಸಮುದಾಯಗಳಿಗೆ ಹಾಗೂ ಧರ್ಮಗಳಿಗೆ ಹಕ್ಕು ಹಾಗೂ ಅವಕಾಶಗಳನ್ನು ನೀಡಲಾಗಿರುತ್ತದೆ. ಇದನ್ನು ಮೇಲಿರುವ ವ್ಯಕ್ತಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಒಂದೇ. ಇದನ್ನೆಲ್ಲ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದಿದ್ದಾರೆ.
ಸಚಿವ ಸಂಪುಟ ಬದಲಾವಣೆಯ ವಿಚಾರ ಸಿಎಂ ಅವರಿಗೆ ಬಿಟ್ಟಿದ್ದು. ಹೈಕಮಾಂಡ್ ನೊಂದಿಗೆ ಚರ್ಚಿಸಿ ಸಿಎಂ ಹಾಗೂ ಡಿಸಿಎಂ ಈ ಕುರಿತು ನಿರ್ಧರಿಸಬಹುದು ಎಂದು ಹೇಳಿದ್ದಾರೆ.
ಗ್ಯಾರಂಟಿ ನಿಲ್ಲಿಸಬೇಕೆಂಬ ಶಾಸಕ ಗವಿಯಪ್ಪ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ನಾವು ಚುನಾವಣೆಗೂ ಮುನ್ನ ನೀಡಿರುವ ವಾಗ್ದಾನಗಳು. ಈ ಕುರಿತು ಪಕ್ಷ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಯಾರಿಗೂ ಗೊತ್ತಿಲ್ಲದೇ ಕದ್ದು ಮುಚ್ಚಿ ತೆಗೆದುಕೊಂಡಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಧರ್ಮ. ನಮ್ಮ ಕರ್ತವ್ಯ. ನಮ್ಮನಮ್ಮ ಅಭಿಪ್ರಾಯಗಳು ಬೇರೆ ಬೇರೆ ಇರಬಹುದು. ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಯಾವುದೇ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಈ ರೀತಿ ಮಾತನಾಡುವುದು ತಪ್ಪು ಎಂದಿದ್ದಾರೆ.