ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಪರಿಹಾರಕ್ಕೆ ನಗರಾಭಿವೃದ್ಧಿ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮೇ ಅಂತ್ಯದೊಳಗೆ ನಗರದಲ್ಲಿನ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಡೆಡ್‌ಲೈನ್ ನೀಡಲಾಗಿದ್ದು, ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಈ ಕುರಿತು ಖಡಕ್ ಸೂಚನೆ ನೀಡಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನವೇ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ತಾಕೀತು ಮಾಡಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳು ದೇಶ-ವಿದೇಶ ಮಟ್ಟದಲ್ಲಿ ನಗರಕ್ಕೆ ಮಾನಹಾನಿ ಉಂಟುಮಾಡಿರುವ ಹಿನ್ನೆಲೆ ಸರ್ಕಾರ ಗಂಭೀರವಾಗಿ ಈ ವಿಚಾರವನ್ನು ಪರಿಗಣಿಸಿದೆ. ಈ ಹಿಂದೆಯೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಗಡುವು ನೀಡಿದ್ದರೂ ರಸ್ತೆ ದುರಸ್ತಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಇದೀಗ ಬೇಸಿಗೆ ಅಂತ್ಯದೊಳಗೆ ಗುಂಡಿ ಮುಚ್ಚಲೇಬೇಕೆಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಇದೇ ವೇಳೆ ನಗರದಲ್ಲಿ ನಡೆಯುತ್ತಿರುವ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿಗಳಲ್ಲೂ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕಾಮಗಾರಿ ವೇಗ ಹೆಚ್ಚಿಸಬೇಕು ಎಂದು ಸೂಚಿಸಿದ್ದಾರೆ..
ಬಿಟುಮಿನ್ ಕೊರತೆಯಿಂದ ರಸ್ತೆ ಕಾಮಗಾರಿ ತಡ :
ಇನ್ನೊಂದೆಡೆ, ಅಂತಾರಾಷ್ಟ್ರೀಯ ಯುದ್ಧ ಪರಿಸ್ಥಿತಿಯಿಂದಾಗಿ ಬಿಟುಮಿನ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ರಸ್ತೆ ಕಾಮಗಾರಿಗಳು ನಿಧಾನಗೊಂಡಿವೆ. ಪೆಟ್ರೋಲಿಯಂ ಸಂಸ್ಕರಣೆಯ ಉಪ ಉತ್ಪನ್ನವಾಗಿರುವ ಬಿಟುಮಿನ್ ರಸ್ತೆ ಗುಣಮಟ್ಟ ಕಾಪಾಡಲು ಅತ್ಯಾವಶ್ಯಕವಾಗಿದ್ದು, ಭಾರತ ತನ್ನ ಅಗತ್ಯದ ಸುಮಾರು 50 ಶೇಕಡಾ ಬಿಟುಮಿನ್ ಅನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ.
ಇರಾನ್, ಇರಾಕ್, ಬಹ್ರೇನ್ ಸೇರಿದಂತೆ ಹಲವು ದೇಶಗಳಿಂದ ಬಿಟುಮಿನ್ ಆಮದು ಆಗುತ್ತಿದ್ದು, ಯುದ್ಧ ಪರಿಸ್ಥಿತಿಯಿಂದ ಸರಬರಾಜು ಕುಂಠಿತವಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಟುಮಿನ್ ದರ ಏರಿಕೆಯೂ ರಸ್ತೆ ಕಾಮಗಾರಿಗಳ ಮೇಲೆ ಪರಿಣಾಮ ಬೀರಿದೆ.
ಈ ಹಿನ್ನೆಲೆ ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD) ಜೊತೆ ಚರ್ಚಿಸಿ ಹೆಚ್ಚಿನ ದರ ನೀಡಿ ಬಿಟುಮಿನ್ ಖರೀದಿಸಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಿಗೆ ಸಿಎಂ ಪ್ರವಾಸ : ಏ.13ಕ್ಕೆ ಹಂದೂರು ಸೇತುವೆ ಉದ್ಘಾಟನೆ


















