ಕೊಪ್ಪಳ: ಲಂಚದ ಹಣವನ್ನು ಅಧಿಕಾರಿ ನುಂಗಿದರೂ ಬಿಡದ ಲೋಕಾಯುಕ್ತ ಅಧಿಕಾರಿಗಳು ಕಕ್ಕಿಸಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಲಂಚದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಧಿಕಾರಿ ಹಣ ನುಂಗಿದ್ದಾರೆ. ಆದರೆ, ಬಿಡದ ಲೋಕಾಯುಕ್ತ ಅಧಿಕಾರಿಗಳು ಮಾತ್ರ ವಾಂತಿ ಮಾಡಿಸಿ ಹಣ ಹೊರ ತೆಗೆದಿದ್ದಾರೆ.
ದಸ್ತಗಿರ್ ಅಲಿ, ಲೋಕಾ ಬಲೆಗೆ ಬಿದ್ದ ಅಧಿಕಾರಿ. ಲಂಚದ ಹಣ ನುಂಗುತ್ತಿದ್ದಂತೆ ವಾಂತಿ ಮಾಡಿಸಿ ಅಧಿಕಾರಿಗಳು ಕಕ್ಕಿಸಿದ್ದಾರೆ. ಎನ್ ಜಿಓಗೆ ಪ್ರಮಾಣ ಪತ್ರ ನೀಡಲು ಭೀಮನಗೌಡ ಎಂಬ ವ್ಯಕ್ತಿಗೆ ದಸ್ತಗಿರ್ ಅಲಿ ಎರಡು ಸಾವಿರ ರೂ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಆದರೆ ಭೀಮನಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಸ್ತಗಿರ್ ಅಲಿಯನ್ನು ಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕಾಯುಕ್ತ ಪೊಲೀಸರ ಬಲೆಗೆ ಬೀಳುತ್ತಿದ್ದಂತೆ ದಸ್ತಗಿರ್ ಅಲಿ ಹೈಡ್ರಾಮಾ ಮಾಡಿದ್ದಾರೆ. ನೋಟನ್ನು ನುಂಗಿ ಸಾಕ್ಷಿನಾಶ ಮಾಡಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ನೀರು ಕುಡಿಸಿ ವಾಂತಿ ಮಾಡಿಸಿ, ಹಣ ಹೊರಗೆ ತೆಗೆಸಿದ್ದಾರೆ.
ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ್ ಮಾರ್ಗದರ್ಶನದಲ್ಲಿ ಕೊಪ್ಪಳ ಲೋಕಾಯುಕ್ತ ಪಿಐ ನಾಗರತ್ನ, ಸುನೀಲ್ ಮೇಗಿಲಮನಿ ನೇತೃತ್ವದಲ್ಲಿ ದಾಳಿ ನಡೆದಿದೆ.