ಕೊಯಮತ್ತೂರು: ರೇಬಿಸ್(Rabies infection) ಸೋಂಕಿತ ವ್ಯಕ್ತಿಯೊಬ್ಬರು ತಮಿಳುನಾಡಿನ ಕೊಯಮತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊದಲ್ಲಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರೇಬಿಸ್ ಮಾನವನ ದೇಹದ ಮೇಲೆ ಬೀರುವ ಭಯಾನಕ ಪರಿಣಾಮದ ಬಗ್ಗೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಒಡಿಶಾದ ರಾಮ್ ಚಂದರ್ ಎಂಬ 35 ವರ್ಷದ ವ್ಯಕ್ತಿಗೆ ಕೆಲವು ದಿನಗಳ ಹಿಂದೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿನಗಳು ಕಳೆದಂತೆ ಅವನ ನಡವಳಿಕೆಯಲ್ಲಿ ಬದಲಾವಣೆಯಾಗುತ್ತಾ, ಅವರು ಹೆಚ್ಚೆಚ್ಚು ಆಕ್ರಮಣಕಾರಿ ವರ್ತಿಸತೊಡಗಿದರು. ಇದು ಕೊನೆಯ ಹಂತದ ರೇಬೀಸ್‌ನ(Rabies infection) ಲಕ್ಷಣವಾಗಿತ್ತು. ತನ್ನ ಪರಿಸ್ಥಿತಿ ಹೀನಾಯವಾಗುತ್ತಿರುವುದನ್ನು ಮನಗಂಡ ರಾಮ್ ಚಂದರ್ ಗುರುವಾರ ಹತಾಶೆಗೊಳಗಾಗಿ, ಆಸ್ಪತ್ರೆಯ ನೋಟಿಸ್ ಬೋರ್ಡ್ ಗೆ ಕವರ್ ಮಾಡಲಾದ ಗಾಜನ್ನು ತನ್ನ ಕೈಯಿಂದಲೇ ಒಡೆದು ಹಾಕಿ, ಅದರ ಗಾಜಿನ ಪೀಸನ್ನು ತನ್ನ ದೇಹಕ್ಕೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೇಬೀಸ್ ಸೋಂಕಿತ ವ್ಯಕ್ತಿಯ ದೇಹದ ದ್ರವ ತಾಗಿದರೆ ಅದು ಮತ್ತೊಬ್ಬರಿಗೆ ಹರಡುತ್ತದೆ. ರೇಬೀಸ್ ಹರಡಿದರೆ ಎಂಬ ಭಯದಿಂದಾಗಿ, ಆತ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಿರುವ ಘಟನೆಯನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದರೂ ಆಸ್ಪತ್ರೆಯ ಯಾವ ಸಿಬ್ಬಂದಿಯೂ ರಾಮ್ ಚಂದರ್‌ನ ನೆರವಿಗೆ ಧಾವಿಸಲಿಲ್ಲ. ಬದಲಾಗಿ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಧಾವಿಸುವಷ್ಟರಲ್ಲಿ ರಾಮ್ ಚಂದರ್ ವಿಪರೀತ ರಕ್ತಸ್ರಾವವಾಗಿ, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.
ಈ ನೋವಿನ ಘಟನೆಯು ಭಾರೀ ಚರ್ಚೆಗೆ ಗ್ರಾಸವಾಗಿದೆ. ರೇಬೀಸ್ ರೋಗಲಕ್ಷಣಗಳು ಕಾಣಿಸಿಕೊಂಡ ಬಳಿಕ ಸೋಂಕಿತನ ಸಾವು ಶೇ.100ರಷ್ಟಿರುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಈ ರೋಗದಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.
ರೇಬೀಸ್ ಮೆದುಳಿಗೆ ಏನು ಮಾಡುತ್ತದೆ?
ರೇಬಿಸ್ ಒಂದು ವೈರಲ್ ಸೋಂಕು. ಇದು ಕೇಂದ್ರ ನರಮಂಡಲದ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ಮೆದುಳು ಮತ್ತು ಬೆನ್ನುಹುರಿಯ ಮಾರಣಾಂತಿಕ ಉರಿಯೂತಕ್ಕೆ ಕಾರಣವಾಗುತ್ತದೆ. ಇದು ರೇಬೀಸ್ ಲೈಸ್ಸಾವೈರಸ್ ಎಂಬ ನ್ಯೂರೋಟ್ರೋಪಿಕ್ ವೈರಸ್‌ನಿಂದ ಬರುವ ಸೋಂಕು.
“ಸೋಂಕಿತ ಪ್ರಾಣಿ ಕಚ್ಚುವುದರ ಮೂಲಕ ಅಥವಾ ಪರಚುವುದರ ಮೂಲಕ ಈ ವೈರಸ್ ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ. ಒಮ್ಮೆ ಅದು ದೇಹವನ್ನು ಪ್ರವೇಶಿಸಿದರೆ, ಅದು ನರಗಳ ಮೂಲಕ ಪ್ರಯಾಣಿಸಿ ಬಾಹ್ಯ ನರಮಂಡಲವನ್ನು ಪ್ರವೇಶಿಸುತ್ತದೆ. ಅಂತಿಮವಾಗಿ ಯಾವುದೇ ಲಕ್ಷಣಗಳನ್ನು ತೋರಿಸದೇ ಮೆದುಳನ್ನು ಪ್ರವೇಶಿಸುತ್ತದೆ” ಎಂದು ಗುರುಗ್ರಾಮದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ. ನೇಹಾ ರಸ್ತೊಗಿ ಪಾಂಡಾ ತಿಳಿಸಿದ್ದಾರೆ. ವೈರಸ್ ಹರಡುತ್ತಿದ್ದಂತೆ, ಮೆದುಳು ಮತ್ತು ಬೆನ್ನುಹುರಿಯಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ, ಇದು ತೀವ್ರ ನರವೈಜ್ಞಾನಿಕ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಆರಂಭಿಕ ರೋಗಲಕ್ಷಣ ಎಂಬಂತೆ ಜ್ವರ, ತಲೆನೋವು ಮತ್ತು ದೌರ್ಬಲ್ಯ ಕಾಣಿಸಿಕೊಳ್ಳುತ್ತವೆ. ಆದರೆ ಸೋಂಕು ಮುಂದುವರಿದಂತೆ, ಇದು ಆತಂಕ, ಗೊಂದಲ, ಭ್ರಮೆಗಳು, ಪಾರ್ಶ್ವವಾಯು ಮತ್ತು ನುಂಗಲು ಕಷ್ಟವಾಗುವಂಥ ಲಕ್ಷಣಗಳಿಗೆ ಕಾರಣವಾಗುತ್ತದೆ. ರೋಗವು ಎರಡು ಪ್ರಮುಖ ರೂಪಗಳಲ್ಲಿ ಮುಂದುವರಿಯುತ್ತದೆ.
ಫ್ಯೂರಿಯಸ್ ರೇಬೀಸ್
ಸೋಂಕಿತರು ತೀವ್ರವಾದ ಹೈಪರ್ ಆಕ್ಟಿವಿಟಿ, ಭ್ರಮೆಗಳು ಮತ್ತು ವಿಪರೀತ ಭಯವನ್ನು ಅನುಭವಿಸುತ್ತಾರೆ. ಆಗಾಗ್ಗೆ ಹೈಡ್ರೋಫೋಬಿಯಾ ಅಂದರೆ ನೀರಿನ ತೀವ್ರ ಭಯವನ್ನು ಬೆಳೆಸಿಕೊಳ್ಳುತ್ತಾರೆ. ಏಕೆಂದರೆ ಅವರು ನುಂಗಲು ಪ್ರಯತ್ನಿಸಿದಾಗ ಅವರ ಗಂಟಲಿನ ಸ್ನಾಯುಗಳು ಅನಿಯಂತ್ರಿತವಾಗಿ ಸೆಳೆತಗೊಳ್ಳುತ್ತವೆ. ಹೀಗಾಗಿ ನೀರು ಕಂಡರೆ ಹೆದರುವ ಸ್ಥಿತಿ ಎದುರಾಗುತ್ತದೆ. ಕೆಲವರಿಗೆ ಏರೋಫೋಬಿಯಾ ಅಂದರೆ ಗಾಳಿಯ ಭಯ ಆರಂಭವಾಗುತ್ತದೆ. ಚಂದರ್ ಪ್ರಕರಣದಲ್ಲಿ ಕಂಡುಬರುವ ಆಕ್ರಮಣಶೀಲತೆಯು ತೀವ್ರವಾದ ರೇಬೀಸ್ ನ ಸಾಮಾನ್ಯ ಲಕ್ಷಣವಾಗಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.
ಪಾರ್ಶ್ವವಾಯು ರೇಬೀಸ್
ತೀವ್ರವಾದ ರೇಬೀಸ್‌ಗಿಂತ ಭಿನ್ನವಾಗಿ, ಪಾರ್ಶ್ವವಾಯು ರೇಬೀಸ್ ಹೆಚ್ಚು ಸೂಕ್ಷ್ಮವಾಗಿ ಮುಂದುವರಿಯುತ್ತದೆ. ಸೋಂಕು ಕ್ರಮೇಣ ದೇಹವನ್ನು ಪಾರ್ಶ್ವವಾಯುವಿಗೆ ತಳ್ಳುತ್ತದೆ. ನಾಯಿಯು ಕಚ್ಚಿದ ಸ್ಥಳದಿಂದ ಪಾರ್ಶ್ವವಾಯು ಪ್ರಾರಂಭವಾಗುತ್ತದೆ. ನಂತರದಲ್ಲಿ ಕ್ರಮೇಣ ದೇಹಪೂರ್ತಿ ಅದು ಹರಡುತ್ತದೆ. ಕೊನೆಗೆ ಕೋಮಾ, ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ.