ಭುವನೇಶ್ವರ: ಒಡಿಶಾದ ಮೊದಲ ಬಿಜೆಪಿಯ ಸಿಎಂ ಆಗಿ ಮೋಹನ್ ಚರಣ್ ಮಾಝಿ (Mohan Charan Majhi) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು. ಬುಧವಾರ ಒಡಿಶಾದ (Odisha) ಭುವನೇಶ್ವರದ ಜನತಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಮಾಝಿ ಜೊತೆಗೆ ಕನಕ್ ವರ್ಧನ್ ಸಿಂಗ್ ದೇವ್ ಹಾಗೂ ಪ್ರವತಿ ಪರಿದಾ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ರಘುಬರ್ ದಾಸ್ ಮುಖ್ಯಮಂತ್ರಿ ಹಾಗೂ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. 24 ವರ್ಷಗಳ ಕಾಲ ಒಡಿಶಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಬಿಜು ಜನತಾ ದಳ (ಬಿಜೆಡಿ) ನಾಯಕ ನವೀನ್ ಪಟ್ನಾಯಕ್ ಕೂಡ ಈ ಸಮಾರಂಭದಲ್ಲಿ ಹಾಜರಿದ್ದದ್ದು ವಿಶೇಷವಾಗಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಶ್ವಿನಿ ವೈಷ್ಣವ್ ಮತ್ತು ನಿತಿನ್ ಗಡ್ಕರಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಇದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಬಿಜೆಡಿ ಸೋಲು ಅನುಭವಿಸಿದೆ. ಈ ಮೂಲಕ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.