ಕಟಕ್: ನಾಯಕ ರೋಹಿತ್ ಶರ್ಮಾ ಅಬ್ಬರ ಶತಕದ ನೆರವಿನಿಂದ ಮಿಂಚಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ (ODI Cricket) 2ನೇ ಪಂದ್ಯದಲ್ಲಿ 4 ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, 49.5 ಓವರ್‌ಗಳಲ್ಲಿ 304 ರನ್ ಗಳಿಸಿ ಆಲೌಟ್ ಆಯಿತು. ಆರಂಭದಲ್ಲಿಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ತನ್ನ ಪಾಲಿನ ಓವರ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಪ್ರತಿಯಾಗಿ ಆಡಿದ ಟೀಂ ಇಂಡಿಯಾ, 39 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗೆ 308 ರನ್ ಗಳಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2–0 ಅಂತರದಿಂದ ಗೆದ್ದುಕೊಂಡಿದೆ.ಇನ್ನೊಂದು ಪಂದ್ಯ ಬಾಕಿ ಇದ್ದು ಕ್ಲೀನ್ ಸ್ವೀಪ್ ಅವಕಾಶವೂ ಇದೆ.
ರೋಹಿತ್ ಭಯಂಕರ ಬ್ಯಾಟಿಂಗ್
ರೋಹಿತ್ ಶರ್ಮಾ 90 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 12 ಬೌಂಡರಿ ಸಹಿತ 119 ರನ್ ಗಳಿಸಿದರೆ, ಶುಭಮನ್ ಗಿಲ್ (60 ರನ್) ಅರ್ಧಶತಕ ಸಿಡಿದರು. ಶ್ರೇಯಸ್ ಅಯ್ಯರ್ (44 ರನ್) ಹಾಗೂ ಅಕ್ಷರ್ ಪಟೇಲ್ ಸಹ (ಅಜೇಯ 41 ರನ್) ಉಪಯುಕ್ತ ಆಟವಾಡಿದರು.
ಕಳಪೆ ದಾಖಲೆ
ಪ್ರವಾಸಿ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಸೋತು ಸರಣಿ ಕಳೆದುಕೊಂಡಿರುವ ಜತೆಗೆ ಏಕದಿನ ಕ್ರಿಕೆಟ್‌ನಲ್ಲಿ 300ಕ್ಕಿಂತ ಹೆಚ್ಚು ರನ್ ಗಳಿಸಿದರೂ 28ನೇ ಸಲ ಸೋಲು ಕಂಡ ತಂಡ ಎನಿಸಿಕೊಂಡಿತು. ಇಂಗ್ಲೆಂಡ್ ಈವರೆಗೆ 99 ಪಂದ್ಯಗಳಲ್ಲಿ 300ಕ್ಕಿಂತ ಹೆಚ್ಚು ರನ್ ಗಳಿಸಿದೆ.
ಇದನ್ನೂ ಓದಿ: Rohit Sharma : ಕಳಪೆ ಬ್ಯಾಟಿಂಗ್ ಪರಿಣಾಮ; ರಣಜಿ ಆಡಲು ಮುಂದಾದ ರೋಹಿತ್ ಶರ್ಮಾ
ತ್ರಿಶತಕದ ಗಡಿ ದಾಟಿಯೂ ಸೋಲು ಕಂಡ ತಂಡಗಳ ಸಾಲಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 136 ಸಲ ಮುನ್ನೂರಕ್ಕಿಂತ ಹೆಚ್ಚು ರನ್ ಗಳಿಸಿರುವ ಟೀಂ ಇಂಡಿಯಾ, 27 ಸಲ ಸೋತಿದೆ. ವೆಸ್ಟ್ ಇಂಡೀಸ್ (62 ಪಂದ್ಯಗಳಲ್ಲಿ 23 ಸೋಲು), ಶ್ರೀಲಂಕಾ (87 ಪಂದ್ಯಗಳಲ್ಲಿ 19 ಸೋಲು) ಹಾಗೂ ಆಸ್ಟ್ರೇಲಿಯಾ (122 ಪಂದ್ಯಗಳಲ್ಲಿ 18 ಸೋಲು) ನಂತರದ ಸ್ಥಾನಗಳಲ್ಲಿವೆ.