ಬೆಂಗಳೂರು: ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಆಡಳಿತ ಪಕ್ಷ ಪ್ರತಿಪಕ್ಷಗಳ ಮಧ್ಯೆ ದೊಡ್ಡ ಸಂಘರ್ಷವೇ ನಡೆದಿತ್ತು. ಮಾತಿನ ಸಂಘರ್ಷ ಜೋರಾಗುತ್ತಿದ್ದಂತೆ ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಈ ವೇಳೆ ರವಿ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆಂದು ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ದಾಖಲಿಸಿದ್ದರು. ಆನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಡ್ರಾಮಾ ನಡೆಯಿತು. ಈಗ ಈ ಪ್ರಕರಣ ರಾಜ್ಯಪಾಲರ ಅಂಗಳ ತಲುಪಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ದೂರು ನೀಡಿತ್ತು. ಹೀಗಾಗಿ ರಾಜ್ಯಪಾಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿಗೆ ಬುಲಾವ್ ನೀಡಿದ್ದರು. ಸದ್ಯ ಸಿಟಿ ರವಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ರನ್ನು ಭೇಟಿಯಾಗಿ ಜಟಾಪಟಿಯ ಕುರಿತು ಮಾಹಿತಿ ನೀಡಿದ್ದಾರೆ.
ಡಿ. 25ರಂದು ಸರ್ಕಾರ ಕೂಡ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಆದರೂ ಇದುವರೆಗೂ ಸಿಐಡಿ ತಂಡ ಬೆಳಗಾವಿಗೆ ಭೇಟಿ ನೀಡಿಲ್ಲ. ಸದ್ಯದಲ್ಲೇ ಸಿಐಡಿ ಟೀಂ ಬೆಳಗಾವಿಗೆ ತಲುಪಲಿದೆ. ಆದರೆ ಸಿಐಡಿಗೆ ಇಲ್ಲೊಂದು ಸವಾಲು ಎದುರಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ದೂರಿನನ್ವಯ ಸ್ಥಳ ಮಹಜರು ನಡೆಸಬೇಕಾದರೆ ಸುವರ್ಣಸೌಧಕ್ಕೆ ಕಾಲಿಡಬೇಕು. ಆದರೆ, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸ್ಥಳ ಮಹಜರಿಗೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿಐಡಿ ಮುಂದಿನ ಯೋಜನೆ ಏನು ಎಂಬುದು ಇನ್ನೂ ಗೌಪ್ಯವಾಗಿಯೇ ಇದೆ.