ರಾಮನಗರ: ಜಿಲ್ಲೆಯ ಕಾಲೇಜಿನ ಹಾಸ್ಟೆಲ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು (Nursing Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಹಾರೋಹಳ್ಳಿ (Harohalli) ತಾಲೂಕಿನ ಪ್ರತಿಷ್ಠಿತ ದಯಾನಂದ ಸಾಗರ್ ಕಾಲೇಜಿನಲ್ಲಿ ನಡೆದಿದೆ. ಅನಾಮಿಕಾ (19) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಅನಾಮಿಕ ಅವರು ಕೇರಳ ಮೂಲದ ಕಣ್ಣೂರಿನವರು.
ಈ ವಿದ್ಯಾರ್ಥಿನಿ ಮೊದಲ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಾಂಗ ಮಾಡುತ್ತಿದ್ದರು. ಮಂಗಳವಾರ ಎಂದಿನಂತೆ ಎಲ್ಲರೊಂದಿಗೆ ಮಾತನಾಡಿ ಕಾಲೇಜಿನ ಹಾಸ್ಟೆಲ್ ನಲ್ಲಿ ಚೆನ್ನಾಗಿಯೇ ಇದ್ದರು. ಆದರೆ, ರಾತ್ರಿ 10 ಗಂಟೆ ವೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ರಾತ್ರಿ ವೇಳೆ ವಿದ್ಯಾರ್ಥಿನಿ ಊಟಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತೆಯರು ರೂಮ್ ಬಳಿ ಹೋಗಿ ನೋಡಿದ್ದಾರೆ. ಬಾಗಿಲು ತಟ್ಟಿದರೂ ತೆಗೆಯದ ಹಿನ್ನೆಲೆಯಲ್ಲಿ ಕಿಟಕಿ ಬಳಿ ಹೋಗಿ ನೋಡಿದ್ದಾರೆ. ಆಗ ನೇಣು ಬಿಗಿದ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹಾರೋಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.