ಬೆಂಗಳೂರು: ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರವನ್ನು ಘೋಷಣೆ ಮಾಡಿದೆ. 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅಂದರೆ, ಏಪ್ರಿಲ್-ಜೂನ್ ಅವಧಿಗೆ ಬಡ್ಡಿ ಘೋಷಣೆ ಮಾಡಿದೆ. ಆದರೆ, ಪೋಸ್ಟ್ ಆಫೀಸ್ ಆರ್.ಡಿ, ಉಳಿತಾಯ ಯೋಜನೆ, ಪಿಪಿಎಫ್ ಸೇರಿ ಎಲ್ಲ ಯೋಜನೆಗಳ ಬಡ್ಡಿದರಲ್ಲಿ ಸರ್ಕಾರವು ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದಾಗಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ನಿರಾಸೆಯಾಗಿದೆ. ಆದರೆ, ಇವು ಸುರಕ್ಷಿತ ಹೂಡಿಕೆ ಯೋಜನೆಗಳಾಗಿರುವುದರಿಂದ ಜನ ಹೂಡಿಕೆ ಮುಂದುವರಿಸಬಹುದಾಗಿದೆ. ಯಾವ ಯೋಜನೆಗಳಿಗೆ ಎಷ್ಟು ಬಡ್ಡಿ ನೀಡಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳ ಪಟ್ಟಿ ಇಲ್ಲಿದೆ
ಯೋಜನೆಯ ಹೆಸರು ವಾರ್ಷಿಕ ಬಡ್ಡಿದರ
ಪೋಸ್ಟ್ ಆಫೀಸ್ ಉಳಿತಾಯ ಖಾತೆ 4%
ಸುಕನ್ಯಾ ಸಮೃದ್ಧಿ ಯೋಜನೆ (SSY) 8.2%
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) 8.2%
ಪಿಪಿಎಫ್ 7.1%
ರಾಷ್ಟ್ರೀಯ ಉಳಿತಾಯ ಪತ್ರ (NSC) 7.7%
ಮಹಿಳಾ ಸಮ್ಮಾನ್ ಉಳಿತಾಯ ಪತ್ರ (MSSC) 7.5%
ಕಿಸಾನ್ ವಿಕಾಸ್ ಪತ್ರ (KVP) 7.5%
ಮಾಸಿಕ ಆದಾಯ ಯೋಜನೆ (Post Office MIS) 7.4%
ತೆರಿಗೆ ವಿನಾಯಿತಿ ಲಾಭ
ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಬಡ್ಡಿಯನ್ನು ವಾರ್ಷಿಕವಾಗಿ ಜಮೆ ಮಾಡಲಾಗುತ್ತದೆ. ಆದರೆ ಮಾಸಿಕ ಆದಾಯ ಯೋಜನೆಯಲ್ಲಿ ಪ್ರತಿ ತಿಂಗಳು ಬಡ್ಡಿ ಸಿಗುತ್ತದೆ. ಪಿಪಿಎಫ್, ಸುಕನ್ಯಾ ಸಮೃದ್ಧಿ ಮತ್ತು 5 ವರ್ಷದ ಎಫ್.ಡಿ ಯೋಜನೆಗಳಿಗೆ ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ವಿನಾಯಿತಿ ಲಭ್ಯವಿದೆ. ತೆರಿಗೆ ವಿನಾಯಿತಿಯು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರಿಗೆ ಮಾತ್ರ ಅನ್ವಯವಾಗುತ್ತದೆ.
ಸಣ್ಣ ಉಳಿತಾಯ ಯೋಜನೆಗಳು ಏಕೆ ಸುರಕ್ಷಿತ?
ಷೇರು ಮಾರುಕಟ್ಟೆಯಲ್ಲಿ ಏರಿಳಿತ ನಿಶ್ಚಿತವಾಗಿರುತ್ತದೆ. ಇವುಗಳಲ್ಲಿ ಹೂಡಿಕೆ ಮಾಡುವುದನ್ನು ರಿಸ್ಕ್ ಎಂದೇ ಪರಿಗಣಿಸಲಾಗುತ್ತದೆ. ಆದರೆ, ಸಣ್ಣ ಉಳಿತಾಯ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಇರುವುದರಿಂದ ಇವು ಹೂಡಿಕೆದಾರರಿಗೆ ಸ್ಥಿರ ಆದಾಯ ತಂದುಕೊಡುತ್ತವೆ. ಆದರೂ, ಇವು ದೀರ್ಘಾವಧಿಯಲ್ಲಿ ಜನ ಹೆಚ್ಚಿನ ಹಣ ಗಳಿಸಲು ನೆರವಾಗುತ್ತವೆ.



















