ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಯಾವಾಗಲೂ ಏರಿಳಿತ ಇದ್ದೇ ಇರುತ್ತದೆ. ಹೆಚ್ಚಿನ ಜ್ಞಾನ ಇದ್ದವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ಇತ್ತೀಚೆಗೆ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಕೂಡ ರಿಸ್ಕ್ ನಿಂದ ಕೂಡಿದೆ. ಆದರೆ, ಪೋಸ್ಟ್ ಆಫೀಸಿನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC Investment)ದಲ್ಲಿ ಹೂಡಿಕೆ ಮಾಡಿದರೆ, ನಿಶ್ಚಿತ ಆದಾಯ ಲಭಿಸುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಬಲವಿರುವ ಕಾರಣ ಹೂಡಿಕೆ ಮಾಡಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಂಚೆ ಕಚೇರಿಯ ಎನ್ಎಸ್ ಸಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ವಾರ್ಷಿಕ ಶೇ.7.7ರ ಬಡ್ಡಿದರ ನೀಡಲಾಗುತ್ತದೆ. ಇದರ ಆಧಾರದ ಮೇಲೆ ನೀವು ಈ ಯೋಜನೆಯಲ್ಲಿ 3.5 ಲಕ್ಷ ರೂಪಾಯಿ ಠೇವಣಿ ಇಟ್ಟರೆ, 5 ವರ್ಷದ ಹೂಡಿಕೆ ಅವಧಿ ಮುಗಿದ ನಂತರ 1.57 ಲಕ್ಷ ರೂಪಾಯಿ ಬಡ್ಡಿಯ ಲಾಭ ಸಿಗುತ್ತದೆ. ಅಲ್ಲಿಗೆ, ನೀವು ಹೂಡಿಕೆ ಮಾಡಿದ 3.5 ಲಕ್ಷ ರೂಪಾಯಿಯು 5.07 ಲಕ್ಷ ರೂಪಾಯಿ ಆಗಿರುತ್ತದೆ.
ಅಂಚೆ ಕಚೇರಿಯ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ, ಎನ್ ಎಸ್ ಸಿ ಹೂಡಿಕೆ ಯೋಜನೆಯು 5 ವರ್ಷಗಳ ಲಾಕ್-ಇನ್ ಪೀರಿಯಡ್ ಹೊಂದಿದೆ. ಅಂದರೆ, ಹೂಡಿಕೆ ಮಾಡಿದ 5 ವರ್ಷಗಳವರೆಗೆ ಹೂಡಿಕೆ ಹಿಂಪಡೆಯಲು ಆಗುವುದಿಲ್ಲ.
ಕೇಂದ್ರ ಸರ್ಕಾರ ಬೆಂಬಲಿತ ಯೋಜನೆಯಲ್ಲಿ ಹೂಡಿಕೆ ಮಾಡಲು ಭಾರತೀಯ ನಾಗರಿಕರಾಗಿರಬೇಕು ಎಂದು ತಿಳಿಸಲಾಗಿದೆ. ಇದರಲ್ಲಿ ಕನಿಷ್ಠ 1 ಸಾವಿರ ರೂಪಾಯಿಯಿಂದ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿಯನ್ನು ಪರಿಶೀಲನೆ ನಡೆಸಲಾಗುತ್ತದೆ.
ಇದನ್ನೂ ಓದಿ : ಲಿಸ್ಟ್ ‘ಎ’ ಪದಾರ್ಪಣೆಯಲ್ಲೇ ವಿಶ್ವದಾಖಲೆ | ಜಾಂಟಿ ರೋಡ್ಸ್ ಹಿಂದಿಕ್ಕಿದ 24ರ ಹರೆಯದ ವಿಘ್ನೇಶ್ ಪುತ್ತೂರು!



















