ಬೆಂಗಳೂರು: ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರಿಯಲ್ಲಿ ಇಲ್ಲದವರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿ ಬಳಿಕ ಯಾವುದೇ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ, ಕೆಲಸಕ್ಕೆ ಸೇರಿದ ಕೂಡಲೇ ಖಾಸಗಿ ಉದ್ಯೋಗಿಗಳು ನಿವೃತ್ತಿ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ, ಹಣದುಬ್ಬರ ಏರಿಕೆ, ಜೀವನ ವೆಚ್ಚದ ಏರಿಕೆಯಿಂದಾಗಿ ನಿವೃತ್ತಿ ಬಳಿಕ ಹೆಚ್ಚಿನ ಪಿಂಚಣಿ ಬೇಕಾಗುತ್ತದೆ. ಹಾಗಂತ ಚಿಂತೆ ಬೇಡಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅನ್ವಯ ಹೂಡಿಕೆ ಮಾಡಿದರೆ, ನಿವೃತ್ತಿ ಬಳಿಕ ಜೀವನ ಪರ್ಯಂತ 75 ಸಾವಿರ ರೂ. ಪಿಂಚಣಿ ಪಡೆಯಬಹುದಾಗಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಕೇಂದ್ರ ಸರ್ಕಾರದಿಂದ ಅನುಮೋದಿತ ಹೂಡಿಕೆ ಯೋಜನೆಯಾಗಿದ್ದು, ಇದನ್ನು ದೀರ್ಘಾವಧಿಯ ಪಿಂಚಣಿಗಾಗಿ ಬಳಸಲಾಗುತ್ತದೆ. ನೀವು NPS ನಲ್ಲಿ ಪ್ರತಿ ತಿಂಗಳು 10,000 ರೂ.ಗಳನ್ನು ಹೂಡಿಕೆ ಮಾಡಿದರೆ ಮತ್ತು ಆ ಮೊತ್ತವನ್ನು ಪ್ರತಿ ವರ್ಷ ಶೇ.5ರಷ್ಟು ಹೆಚ್ಚಿಸಿದರೆ, ನೀವು 60 ನೇ ವಯಸ್ಸಿಗೆ ಸುಮಾರು 1 ಕೋಟಿ 88 ಲಕ್ಷ ರೂ.ಗಳ ನಿವೃತ್ತಿ ನಿಧಿಯನ್ನು ಹೊಂದಬಹುದು.
ಈ ನಿಧಿಯಲ್ಲಿ ನೀವು ತಿಂಗಳಿಗೆ ಜೀವನ ಪರ್ಯಂತ 75 ಸಾವಿರ ರೂಪಾಯಿಯನ್ನು ಮಾಸಿಕ ಪಿಂಚಣಿಯಾಗಿ ಪಡೆಯಬಹುದು. ಈ ಪೂಲ್ಡ್ ಫಂಡ್ ನಲ್ಲಿ ಶೇ. 60 ರಷ್ಟು ಹಣವನ್ನು ‘ವರ್ಷಾಶನ’ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ತಿಂಗಳಿಗೆ ಸುಮಾರು ರೂ. 75,000 ಖಾತರಿಯ ಪಿಂಚಣಿ ಪಡೆಯಬಹುದು. ಉಳಿದ ಶೇ. 40 ಅಥವಾ ಸುಮಾರು ರೂ. 75 ಲಕ್ಷವನ್ನು ಒಂದೇ ಬಾರಿಗೆ ಹಿಂಪಡೆಯಬಹುದು.
ಎನ್ ಪಿ ಎಸ್ ಯೋಜನೆಯ ಸರಾಸರಿ ವಾರ್ಷಿಕ ಆದಾಯವು ಶೇ.9 ರಿಂದ 12 ರಷ್ಟಿದ್ದು, ಇದು PPF ಮತ್ತು FD ನಂತಹ ಸಾಂಪ್ರದಾಯಿಕ ಯೋಜನೆಗಳಿಗಿಂತ ಹೆಚ್ಚಾಗಿದೆ. ಇದರ ಜತೆಗೆ, ನಿವೃತ್ತಿಯ ಸಮಯದಲ್ಲಿ ಪಡೆದ ಮೊತ್ತದ ಶೇಕಡಾ 60 ರಷ್ಟು ತೆರಿಗೆ ಮುಕ್ತವಾಗಿರುತ್ತದೆ. ಒಟ್ಟು ನಿಧಿ 5 ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ಸಂಪೂರ್ಣ ಮೊತ್ತವನ್ನು ತೆರಿಗೆ ಮುಕ್ತವಾಗಿ ಹಿಂಪಡೆಯಬಹುದು. ಹಾಗಾಗಿ, ಈ ಮಾದರಿಯ ಹೂಡಿಕೆಯನ್ನು ಪರಿಗಣಿಸಬಹುದು.



















