ಬೆಂಗಳೂರು: ದೇಶದಲ್ಲಿ ಏಕೀಕೃತ ಪಾವತಿ ವ್ಯವಸ್ಥೆ ಅಂದರೆ, ಯುಪಿಐ ಪೇಮೆಂಟ್ ತುಂಬ ಜನಪ್ರಿಯವಾಗಿದೆ. 10 ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿವರೆಗೆ ಬಹುತೇಕ ಜನ ಯುಪಿಐ ಮೂಲಕವೇ ಪಾವತಿ ಮಾಡುತ್ತಾರೆ. ಇದನ್ನು ಮನಗಂಡಿರುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI)ವು ಶೀಘ್ರದಲ್ಲೇ ಯುಪಿಐ ಗ್ರಾಹಕರಿಗೆ ಹೊಸ ಫೀಚರ್ ಪರಿಚಯಿಸಲಿದೆ. ಇದರಿಂದ ಗ್ರಾಹಕರು ಯುಪಿಐ ಪೇಮೆಂಟ್ ಮಾಡುವಾಗಲೇ ಇಎಂಐ ಸೌಕರ್ಯ ಪಡೆಯಲಿದ್ದಾರೆ.
ಎನ್ ಪಿ ಸಿ ಐ ಹೊಸ ಸೌಲಭ್ಯವು ಕ್ರೆಡಿಟ್ ಕಾರ್ಡ್ ಬಳಕೆಯಷ್ಟೇ ಸರಳವಾಗಿರುತ್ತದೆ. ಈ ಸೌಲಭ್ಯ ಜಾರಿಗೆ ಬಂದರೆ, ಗ್ರಾಹಕರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಇಎಂಐ ಆಯ್ಕೆ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ. ಇದನ್ನು ಕ್ರೆಡಿಟ್ ಕಾರ್ಡ್ ಗೆ ಪರ್ಯಾಯವಾಗಿ ನೋಡಲಾಗುತ್ತಿದೆ. ಯಾವುದೇ ಪೇಮೆಂಟ್‌ಗಳನ್ನು ಯುಪಿಐ ಆ್ಯಪ್ ಮೂಲಕ ಇಎಂಐ ಕಂತುಗಳಲ್ಲಿ ಮಾಡಬಹುದು.
ಎನ್ ಪಿ ಸಿ ಐ ಈಗ ಹೊಸ ವ್ಯವಸ್ಥೆ ಜಾರಿ ಬಗ್ಗೆ ಸಿದ್ಧತೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ‘ಯುಪಿಐ ಇಎಂಐ’ ಸೌಲಭ್ಯ ಪರಿಚಯಿಸಲು ಸಿದ್ಧತೆ ಮಾಡುತ್ತಿದೆ. ಇದರಲ್ಲಿ ಕ್ರೆಡಿಟ್ ಕಾರ್ಡ್ ನಂತೆಯೇ ಪಾವತಿ ಮಾಡುವ ಸೌಲಭ್ಯ ನೀಡಲಾಗುತ್ತದೆ. ಅಂದರೆ, ಈಗ ಪಾವತಿಸಿ ನಂತರ ಬಿಲ್ ಪಾವತಿಸುವ ಸೌಲಭ್ಯ ಇದಾಗಿರಲಿದೆ. ಬಳಕೆದಾರರು ತಮ್ಮ ಬಿಲ್ ಗಳನ್ನು ಮಾಸಿಕ ಕಂತುಗಳ ಮೂಲಕವೂ ಪಾವತಿಸಲು ಸಾಧ್ಯವಾಗಲಿದೆ.
ಉದಾಹರಣೆಗೆ, ನೀವೊಂದು ಮೊಬೈಲ್ ಅಂಗಡಿಗೆ ಹೋಗಿದ್ದೀರಿ. ಅಲ್ಲಿ ನೀವು, 30 ಸಾವಿರ ರೂಪಾಯಿ ಮೊಬೈಲ್ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಒಮ್ಮೆಯೇ 30 ಸಾವಿರ ರೂಪಾಯಿ ಪಾವತಿಸುವ ಬದಲು, ಇಎಂಐ ಆಯ್ಕೆಯನ್ನು ಮಾಡಿಕೊಂಡು ಪಾವತಿ ಮಾಡಬಹುದಾಗಿದೆ. 30 ಸಾವಿರ ರೂಪಾಯಿಯನ್ನು ಮಾಸಿಕ ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ. ಆದಾಗ್ಯೂ, ಇದರ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.



















