ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಪುಣ್ಯಸ್ಮರಣೆಯನ್ನು ಇಂದು ಆಚರಿಸಲಾಯಿತು. ಅಂಬರೀಶ್ ಅಗಲಿ ಇಂದಿಗೆ ಆರು ವರ್ಷಗಳಾಗಿದ್ದು, ಅವರು ಇಂದಿಗೂ ಅಭಿಮಾನಿಗಳ ಮನದಲ್ಲಿ ನೆಲೆಯೂರಿದ್ದಾರೆ. ಇಂದು ಅಂಬರೀಶ್ ಅವರ ಆರನೇ ವರ್ಷದ ಪುಣ್ಯ ಸ್ಮರಣೆ ಇರುವ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ ಅವರು ಅಂಬರೀಶ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ನೆನೆದಿದ್ದಾರೆ. ‘ನಿಮ್ಮ ಪ್ರೀತಿ, ನಿಮ್ಮ ಇರುವಿಕೆ ಶಾಶ್ವತ… ಸದಾ ಜನರ ಮಧ್ಯೆ ಇದ್ದು ಸ್ಪಂದನೀಯ ವ್ಯಕ್ತಿತ್ವದೊಂದಿಗೆ ನಮ್ಮೊಂದಿಗಿದ್ದ ಡಾ. ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಪ್ರೀತಿ, ಭಕ್ತಿಪೂರ್ವಕವಾಗಿ ಸ್ಮರಿಸುತ್ತಿದ್ದೇನೆ. ನಾಡು, ನುಡಿಗೆ ಅವರು ಸಲ್ಲಿಸಿದ ಸೇವೆಗಳು, ಅವರು ಕಲಿಸಿದ ಜೀವನ ಪಾಠಗಳು ಸದಾ ನಮ್ಮನ್ನು ಕಾಯಲಿವೆ, ಅವರಿಗೆ ಜನಮಾನಸದಲ್ಲಿ ದೊರಕುತ್ತಿರುವ ಅಭಿಮಾನ ನಮ್ಮ ಕುಟುಂಬಕ್ಕೆ ನಿರಂತರ ಆಶೀರ್ವಾದ. ಇದಕ್ಕೆ ನಾವೆಲ್ಲಾ ಚಿರಋಣಿ’ ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು, ‘ನೀವು ಪ್ರತಿ ಹೃದಯ ಬಡಿತದಲ್ಲಿ ನೆಲೆಸಿದ್ದೀರಿ, ಎಲ್ಲೆಲ್ಲೂ ಇದ್ದೀರಿ, ಪ್ರತಿ ಹುಟ್ಟಿನಲ್ಲೂ ಇದ್ದೀರಿ. ಈಗ ನೀವು ಮರಳಿ ಬಂದಿದ್ದೀರಿ’ ಎಂದಿದ್ದಾರೆ ಸುಮಲತಾ. ಅಂದಹಾಗೆ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೆ ತಂದೆಯಾಗಿದ್ದು ಅವರಿಗೆ ಮುದ್ದಾದ ಗಂಡು ಮಗು ಜನಿಸಿದೆ. ಅಂಬರೀಶ್ ಅವರೇ ಮತ್ತೆ ಹುಟ್ಟಿಬಂದಿದ್ದಾರೆ ಎಂಬ ನಂಬಿಕೆಯಲ್ಲಿ ಅವರ ಕುಟುಂಬ ಇದೆ. ಇದೇ ಕಾರಣಕ್ಕೆ ಸುಮಲತಾ ಅವರು ‘ಮರಳಿ ಬಂದಿದ್ದೀರಿ’ ಎಂದು ನೆನಪು ಮಾಡಿಕೊಂಡಿದ್ದಾರೆ.