ಚಿಕ್ಕಬಳ್ಳಾಪುರ : ಈ ಬಾರಿಯ ಕನ್ನಡ ರಾಜ್ಯೋತ್ಸವವು ಜಿಲ್ಲಾ ಮಟ್ಟದ ಕನ್ನಡ ಕಾರ್ಯಕ್ರಮವನ್ನು ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದೊಂದಿಗೆ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ತಿಳಿಸಿದ್ದಾರೆ.
ನಗರಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಕುರಿತ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ, ಸಾಹಿತಿಗಳ ಸಲಹೆ ಸೂಚನೆಗಳನ್ನು ಆಲಿಸಿ ಮಾತನಾಡಿದ ಇವರು ಈ ಬಾರಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದ್ದು, ಅಂದು ವೇದಿಕೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ನಾಡಗೀತೆ, ವಿದ್ಯಾರ್ಥಿಗಳಿಂದ ಸಮೂಹ ಗೀತ ಗಾಯನ ಮತ್ತು ನೃತ್ಯ, ಗೌರವ ವಂದನೆ, ಸಾಧಕರಿಗೆ ಸನ್ಮಾನ, ಪೊಲೀಸ್ ಕವಾಯತು ಕಾರ್ಯಕ್ರಮಗಳನ್ನು ಎಂದಿನಂತೆಯೇ ಆಯೋಜಿಸಲಾಗುವುದು.
ಅಲ್ಲದೆ ನಗರದ ಉಪವಿಭಾಗಾಧಿಕಾರಿ ಕಚೇರಿಯಿಂದ ಬಿ.ಬಿ.ರಸ್ತೆಯ ಮೂಲಕ ಕ್ರೀಡಾಂಗಣದವರೆಗೆ ಸ್ಥಬ್ದ ಚಿತ್ರಗಳು ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಗುವುದು.
ಸ್ಥಳೀಯ ಸಾಹಿತಿಗಳನ್ನು ಒಳಗೊಂಡಂತೆ ಪ್ರಮುಖ ಕನ್ನಡ ಸಾಹಿತಿಗಳ ಛಾಯಾಚಿತ್ರಗಳನ್ನು ಹಾಗೂ ಅವರ ಸಂದೇಶಗಳ ಫಲಕಗಳನ್ನ ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ವೇದಿಕೆ ಸಿದ್ಧತೆ, ಅಲಂಕಾರ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆಹ್ವಾನ ಪತ್ರಿಕೆಗಳ ಮುದ್ರಣ ಮತ್ತು ವಿತರಣೆ, ಆಂಬುಲೆನ್ಸ್ ವ್ಯವಸ್ಥೆ, ಕಾರ್ಯಕ್ರಮ ನಿರ್ವಹಣೆ, ನಿರೂಪಣೆ, ಕ್ರೀಡಾಂಗಣ ಸ್ವಚ್ಛತೆ ಇನ್ನಿತರೆ ಸಿದ್ಧತಾ ಕಾರ್ಯಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.