ಬೆಂಗಳೂರು: ಐದು ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಸ್ಲಾಂ ಪಾಷಾ ಬಂಧಿತ ಕುಖ್ಯಾತ ಕಳ್ಳ, ಇದುವರೆಗೂ ಈತನ ವಿರುದ್ಧ 150 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಅಸ್ಲಾಂ, ಹಗಲೆಲ್ಲ ಐಷಾರಾಮಿ ಮನೆಗಳನ್ನು ಲೆಕ್ಕ ಮಾಡಿಕೊಂಡು ತಡರಾತ್ರಿ ಕೈಚಳಕ ತೋರುತ್ತಿದ್ದನು.
ಅಸ್ಲಾಂ ತಂದೆ -ತಾಯಿಗೆ ಒಟ್ಟು ಏಳು ಜನ ಮಕ್ಕಳು. ಏಳು ಜನ ಮಕ್ಕಳ ಪೈಕಿ ಮೂವರದ್ದು ಕಳ್ಳತನವೇ ವೃತ್ತಿಯಾಗಿದೆ. ಕಳೆದ 20 ವರ್ಷಗಳಿಂದ ಕಳ್ಳತನವೇ ಫುಲ್ ಟೈಂ ಕೆಲಸವಾಗಿ ಮಾಡಿಕೊಂಡಿದ್ದ ಅಸ್ಲಾಂ, ಕದ್ದ ಹಣದಲ್ಲಿ ಒಂದು ಪಾಲು ಅಜ್ಮೀರ್ ದರ್ಗಾಗೆ ಕಾಣಿಕೆ ಹಾಕುತ್ತಿದ್ದ. ಪ್ರತಿ ಬಾರಿ ಕಳ್ಳತನ ಮಾಡಿದಾಗ ಅಜ್ಮೀರ್ ದರ್ಗಾಗೆ ಹೋಗಿ, ಪ್ರಾರ್ಥನೆ ಮುಗಿಸಿ, ಬಳಿಕ ಗೋವಾಗೆ ಹೋಗಿ ಮಜಾ ಮಾಡಿ ಕದ್ದ ಹಣವನ್ನು ಖಾಲಿ ಮಾಡಿ ಬರುತ್ತಿದ್ದ. ನಂತರ ಮನೆಗೆ ಬಂದು ಕುಟುಂಬಸ್ಥರಿಗೆ ಜೈಲಿನಿಂದ ಬಿಡಿಸಲು ಮಾಡಿದ್ದ ಸಾಲದ ಹಣ ತೀರಿಸಿ. ಮತ್ತೆ ಮುಂದೆ ಇನ್ನೊಂದು ಕಳ್ಳತನಕ್ಕೆ ಮುಂದಾಗುತ್ತಿದ್ದ.
ಐಷರಾಮಿ ಮನೆಗಳ ಎದುರು ಹಾಲು ಪೇಪರ್ ಮನೆಬಳಿ ಬಿದ್ದಿದ್ದು ಮೈನ್ ಡೋರ್ ಲಾಕ್ ಆಗಿದ್ದರೆ ಹಾಗೂ ಲೈಟ್ಸ್ ಆಫ್ ಆಗಿದ್ದು, ಮನೆಯ ಗೇಟ್ ಹೊರಗಿನಿಂದ ಲಾಕ್ ಆಗಿದ್ದರೆ ಅಂತಹ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಹಾಗೂ ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದರೆ ಕುತ್ತಿಗೆಯಲ್ಲಿರುವ ಸರ ಎಗರಿಸಿ ಪರಾರಿಯಾಗುತ್ತಿದ್ದರು. ಕಿಟಕಿ ಪಕ್ಕದಲ್ಲಿ ಮೈನ್ ಡೋರ್ ಇದ್ದರೆ ಕಿಟಕಿ ಗ್ಲಾಸ್ ಒಡೆದು ನಂತರ ಡೋರ್ ಓಪನ್ ಮಾಡಿ ಕಳ್ಳತನ ಮಾಡುತ್ತಿದ್ದರು.
ಆರೋಪಿ ಒಂದು ಠಾಣೆ ವ್ಯಾಪ್ತಿಯಲ್ಲಿ ಒಂದು ಸಲ ಕಳ್ಳತನ ಮಾಡಿದರೆ ಕನಿಷ್ಟ ಒಂದು ವರ್ಷವಾದರು ಮತ್ತೆ ಆ ಏರಿಯಾಗೆ ಕಾಲಿಡುತ್ತಿರಲಿಲ್ಲ. ಸದ್ಯ ವಿದ್ಯಾರಣ್ಯಪುರ ಪೊಲೀಸರಿಂದ ಖರ್ತನಾಕ್ ಕಳ್ಳ ಸೈಯ್ಯದ್ ಅಸ್ಲಾಂನನ್ನು ಬಂಧಿಸಲಾಗಿದ್ದು, 22.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರು | ವಾಟರ್ ಟ್ಯಾಂಕರ್ ಚಕ್ರಕ್ಕೆ ಸಿಲುಕಿ 11 ವರ್ಷದ ಬಾಲಕ ಸಾವು



















