ಉಪ್ಪಳ : ಮಂಗಳೂರು ಮೂಲದ ನಟೋರಿಯಸ್ ರೌಡಿಶೀಟರ್, ನೌಫಲ್ ಬಜಾಲ್ ಅಲಿಯಾಸ್ ಟೊಪ್ಪಿ ನೌಫಲ್‌ನನ್ನು ಕೇರಳದ ಉಪ್ಪಳದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದ ನೌಫಲ್, ಮಂಗಳೂರಿನ ಬಜಾಲ್ ಫೈಝಲ್ ನಗರ ನಿವಾಸಿಯಾಗಿದ್ದು, ಈತ ಹಲವಾರು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ನೌಫಾಲ್, ಇದೀಗ ಬರ್ಬರವಾಗಿ ಹತ್ಯೆಯಾಗಿದ್ದಾನೆ.
ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಿದ ಬಳಿಕ ಕಾಸರಗೋಡು ಭಾಗದಲ್ಲಿ ಟೊಪ್ಪಿ ನೌಫಾಲ್ ಸಕ್ರಿಯವಾಗಿದ್ದ. ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಉಪ್ಪಳ ಗೇಟ್ ಬಳಿಗೆ ಈತನನ್ನು ಕರೆಸಿದ್ದ ತಂಡವೊಂದು ಅಲ್ಲಿಯೇ ತಲವಾರುಗಳಿಂದ ಕಡಿದು ಹಾಕಿದೆ ಎನ್ನಲಾದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಶವವನ್ನು ಪೆರಿಯಾರಂ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ನೌಫಲ್ ಬಜಾಲ್ ಮೃತದೇಹದಲ್ಲಿ ತಲೆ, ಕುತ್ತಿಗೆ ಭಾಗಕ್ಕೆ ಕಡಿದ ಗುರುತುಗಳಿವೆ. ಅಲ್ಲದೆ, ಶವದ ದೇಹದಲ್ಲಿ ಬನಿಯಾನ್ ಮತ್ತು ಪ್ಯಾಂಟ್ ಮಾತ್ರ ಇದ್ದು ಹೊಡೆದಾಟ ಸಂದರ್ಭದಲ್ಲಿ ಶರ್ಟ್ ಎಳೆದುಕೊಂಡು ಹೋಗಿದೆಯಾ ಎನ್ನುವ ಸಂಶಯ ಇದೆ. ಸ್ಥಳಕ್ಕೆ ನೌಫಾಲ್ ಸ್ಕೂಟರಿನಲ್ಲಿ ತೆರಳಿದ್ದ ಎನ್ನುವ ಮಾಹಿತಿ ಇದೆ.
ಟೊಪ್ಪಿ ನೌಫಾಲ್ ಮಂಗಳೂರಿನಲ್ಲಿ ನಟೋರಿಯಸ್ ರೌಡಿ ಜೊತೆಗೆ ಡ್ರಗ್ಸ್ ಸೇವನೆ ಮತ್ತು ವಹಿವಾಟಿನಲ್ಲಿ ಗುರುತಿಸಿಕೊಂಡಿದ್ದ. 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಜಿಯಾ ಮತ್ತು ಇನ್ನೊಬ್ಬನ ಡಬಲ್ ಮರ್ಡರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ. ಆ ಸಂದರ್ಭದಲ್ಲಿ ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ ಜೊತೆಗೆ ಗುರುತಿಸಿಕೊಂಡಿದ್ದ. ತಲ್ಲತ್ ಮತ್ತು ಜಬ್ಬಾರ್ ನ್ಯೂಟ್ರಲ್ ಆದಬಳಿಕ ನೌಫಾಲ್ ತನ್ನದೇ ತಂಡ ಕಟ್ಟಿಕೊಂಡು ಕೊಲೆಯತ್ನ, ವಸೂಲಿ, ಡ್ರಗ್ಸ್, ಅಕ್ರಮ ಗೋಲ್ಡ್ ವಹಿವಾಟಿನಲ್ಲಿ ಸಕ್ರಿಯವಾಗಿದ್ದ. ಕಂಕನಾಡಿ ನಗರ, ವಾಮಂಜೂರು, ಸುರತ್ಕಲ್, ಕಾವೂರು ಸೇರಿ ಹಲವಾರು ಕಡೆಗಳಲ್ಲಿ ಕೇಸುಗಳನ್ನು ಹೊಂದಿದ್ದಾನೆ. ಜಿಯಾ ಕೊಲೆ ಕೇಸಿನಲ್ಲಿ ಈತನೇ ಪ್ರಮುಖ ಆರೋಪಿಯಾಗಿದ್ದ. ಇದೀಗ ಉಪ್ಪಳ ಗೇಟ್ ಬಳಿಯಲ್ಲಿ ಕೊಲೆ ಆಗಿರುವುದರಿಂದ ಅಲ್ಲಿನದ್ದೇ ಗ್ಯಾಂಗ್ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ. ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮೈಸೂರು | ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಾಯಿ



















