ವಿಜಯಪುರ: ವಕ್ಫ್ ಮಂಡಳಿಯಿಂದ ದೇವಸ್ಥಾನಕ್ಕೂ ನೋಟಿಸ್ ನೀಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ವಕ್ಫ್ ಕಾನೂನು ವಿರುದ್ಧ ಹೋರಾಟ ಮಾಡುತ್ತೇವೆ. ಅಧಿಕಾರಿಗಳು ನೋಟಿಸ್ ನೀಡುತ್ತಿರುವುದಕ್ಕೆ ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು. ನಾವೆಲ್ಲ ಸೇರಿ ಕಾನೂನು ಹೋರಾಟ ಮಾಡೋಣ. ನೋಟಿಸ್ ಬಂದರೆ ನಮ್ಮ ಕಚೇರಿ ಸಂಪರ್ಕ ಮಾಡಿ ಎಂದು ಹೇಳಿದ್ದಾರೆ.
ನೋಟಿಸ್ ನೀಡಿದ್ದರ ಬಗ್ಗೆ ಕಾನೂನು ಹೋರಾಟಕ್ಕೆ ವಕೀಲರ ತಂಡ ರಚಿಸುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಜಾಗೃತಿ ಮೂಡಿಸುತ್ತೇವೆ. ರೈತರಿಗೆ ಉಚಿತ ಕಾನೂನು ನೆರವು ನೀಡುತ್ತೇವೆ. ಸಚಿವ ಜಮೀರ್ ಅಹಮದ್ ಖಾನ್ ಪ್ರವಾಸ ಮಾಡಿರುವ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಯಾವುದೇ ವಕ್ಫ್ ಆಸ್ತಿ ಆಗಿಲ್ಲ ಎನ್ನುತ್ತಾರೆ. ವಕ್ಫ್ ಕಾನೂನು ನೆಹರು ಮಾಡಿರುವ ದೊಡ್ಡ ತಪ್ಪು. ಕರ್ನಾಟಕದಲ್ಲಿ ಮತ್ತೊಂದು ಪಾಕಿಸ್ತಾನ ನಿರ್ಮಾಣ ಮಾಡಿದಕ್ಕೆ ವಕ್ಫ್ ಕೆಲಸ ಮಾಡುತ್ತಿದೆ ಎಂದು ಗುಡುಗಿದ್ದಾರೆ.