ಬೆಂಗಳೂರು: “ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಯಲಹಂಕದ ಮಾನ್ಯತಾ ಟೆಕ್ ಪಾರ್ಕ್ ಬಳಿ ಮಳೆ ಪ್ರವಾಹಕ್ಕೆ ಕಾರಣವಾದ ರಾಜಕಾಲುವೆ ಹಾಗೂ ನಾಲೆಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪರಿಶೀಲಿಸಿದ ನಂತರ ಮಾತನಾಡಿದ ಅವರು, “ನಾನು ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಇದು ಬಹಳ ಮುಖ್ಯವಾದ ಜಂಕ್ಷನ್. ಇಲ್ಲಿಂದ ಸಮಸ್ಯೆ ಆರಂಭವಾಗಿ ನಂತರ ಉಳಿದ ಪ್ರದೇಶಗಳಲ್ಲಿ ಸಮಸ್ಯೆಯಾಗುತ್ತಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಅಧಿಕಾರಿಗಳಿಗೂ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ಸಮಸ್ಯೆಗೆ ಕಾರಣವಾಗಿರುವ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದರು.
ಶಾಶ್ವತ ಪರಿಹಾರ ನೀಡಲಾಗುವುದು
“ನಮಗೆ ಯಾರ ಆಸ್ತಿಯನ್ನು ನಷ್ಟ ಮಾಡಲು ಇಷ್ಟವಿಲ್ಲ. ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ. ನೀರು ಸರಾಗವಾಗಿ ಹರಿಯಬೇಕು. ಹೀಗಾಗಿ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿ ಮುಂದುವರಿಸಲು ನನ್ನ ಮುಂದೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ಮುಖ್ಯ” ಎಂದು ತಿಳಿಸಿದರು.
ಮುಖ್ಯ ಆಯುಕ್ತರಿಗೆ ಅಧಿಕಾರ:
“ಮಳೆ ನೀರು ಸರಾಗವಾಗಿ ಹರಿಯುವುದು ಇಲ್ಲಿ ಮುಖ್ಯವೇ ಹೊರತು ಇನ್ಯಾರೂ ಅಲ್ಲ. ನಾವು ಯಾವುದೇ ಕಟ್ಟಡಗಳಿಗೆ ಅಡಚಣೆ ಮಾಡಲು ಬಯಸುವುದಿಲ್ಲ. ನಾವು ಬೆಂಗಳೂರಿನ ಘನತೆ ಹಾಳಾಗಲು ಬಿಡುವುದಿಲ್ಲ. ಹೀಗಾಗಿ ಈ ಭಾಗದ ಭೂಮಾಲೀಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾಗಿದ್ದರೆ ನಾವು ಅದಕ್ಕೆ ಪರಿಹಾರ ನೀಡುತ್ತೇವೆ. ನಮಗೆ ಈ ವಿಚಾರವಾಗಿ ಶಾಶ್ವತ ಪರಿಹಾರ ಬೇಕಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದು, ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ. ನಮ್ಮ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಕಾರ್ಯದರ್ಶಿಗಳಿಗೆ ಈ ವಿಚಾರದಲ್ಲಿ ಇರುವ ಅಡಚಣೆಗಳನ್ನು ತೆರವುಗೊಳಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ” ಎಂದು ತಿಳಿಸಿದರು.


















