ದಾವಣಗೆರೆ: ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ಹೆಚ್ಚಾಗುತ್ತಿದ್ದು, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಊರು ಬಿಟ್ಟು ಹೋಗಿದ್ದಾರೆ. ಹೀಗಾಗಿ ಸರ್ಕಾರವು ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಕಳುಹಿಸಿದೆ. ಈ ಮಧ್ಯೆ ಕಿರುಕುಳದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕೇವಲ 99 ರೂ. ಬಾಕಿ ಇದ್ದಿದ್ದಕ್ಕೆ 58 ಸಾವಿರ ರೂ. ಕಟ್ಟುವಂತೆ ಮೈಕ್ರೋ ಫೈನಾನ್ಸ್ ವೊಂದು ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ಚಂದ್ರಶೇಖರ್ ಎಂಬುವವರಿಗೆ ನೋಟೀಸ್ ಕೊಟ್ಟು, ಹಣ ಪಾವತಿಸುವಂತೆ ಕಿರುಕುಳ ನೀಡುತ್ತಿದೆ ಎಂದು ತಿಳಿದು ಬಂದಿದೆ.
ಚಂದ್ರಶೇಖರ್ ಆನ್ ಲೈನ್ ಮೂಲಕ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ 10 ಲಕ್ಷ ರೂ. ಸಾಲ ಮಾಡಿದ್ದರು. ಪ್ರತಿ ತಿಂಗಳು ಕಂತು ಕಟ್ಟಿದ್ದರು. ಕೊನೆಗೆ 99 ರೂ. ಬಾಕಿ ಉಳಿದಿತ್ತು. ಅದನ್ನು ತೆಗೆದುಕೊಂಡು ಕ್ಲಿಯರ್ ಮಾಡಿ ಅಂತಾ ಕೇಳಿದಾಗ 58 ಸಾವಿರ ರೂ. ಕಟ್ಟುವಂತೆ ಒತ್ತಾಯಿಸಿ, ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
58 ಸಾವಿರ ರೂ. ಕಟ್ಟಿದರೆ ಮಾತ್ರ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡಲಾಗುವುದು ಎಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೇಳಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಕಿರುಕುಳ ತಾಳಲಾರದೆ ಈ ಕುರಿತು ಆರ್ಬಿಐಗೆ ಪತ್ರ ಬರೆಯಲು ಚಂದ್ರಶೇಖರ್ ಮುಂದಾಗಿದ್ದಾರೆ. ಅಲ್ಲದೇ, ದೂರು ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.