ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್ ಗೆ ಐಷಾರಾಮಿ ಟ್ರೀಟ್ಮೆಂಟ್ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪೊಲೀಸರು ಹಾಗೂ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಅಲ್ಲದೇ, ದರ್ಶನ್ ಸೇರಿದಂತೆ ಆ ಗ್ಯಾಂಗ್ ನ ಸದಸ್ಯರನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ, ದರ್ಶನ್ ರನ್ನು ಕರೆದುಕೊಂಡು ಹೋದ ಪೊಲೀಸರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಖಾಕಿ ಬೆಂಗಾವಲು ಪಡೆಯ ಕಾವಲಿನಲ್ಲಿ ಬೆಂಗಳೂರಿನಿಂದ ಬಳ್ಳಾರಿಯ ಕೇಂದ್ರೀಯ ಕಾರಾಗೃಹಕ್ಕೆ ಶಿಫ್ಟ್ ಆಗಿರುವ ನಟ ದರ್ಶನ್ ಬೆಲೆಬಾಳುವ ಟೀ ಶರ್ಟ್ – ಪ್ಯಾಂಟ್, ಕೈಯ್ಯಿಗೆ ಕಡಗ, ಲಕ್ಷ ರೂ. ಮೌಲ್ಯದ ಕೂಲಿಂಗ್ ಗ್ಲಾಸ್ ಸೇರಿದಂತೆ ಐಷಾರಾಮಿ ವಸ್ತುಗಳನ್ನು ಹಾಕಿಕೊಂಡು ಬಳ್ಳಾರಿ ಜೈಲು ಸೇರಿದ್ದರು. ಇದಕ್ಕಾಗಿ ಹಿರಿಯ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಹೋಗುವಾಗ ಕೈದಿಗಳು ತಮ್ಮ ವಸ್ತುಗಳನ್ನು ಜೈಲಿನ ಅಧಿಕಾರಿಗಳಿಗೆ ಹಸ್ತಾಂತರಿಸಿ ಬರಿಗೈಯ್ಯಲ್ಲಿ ಹೋಗಬೇಕು. ಆದರೆ, ಇಲ್ಲಿ ಆ ನಿಮಯ ಪಾಲನೆಯಾಗಿಲ್ಲ. ಹೀಗಾಗಿಯೇ ಪರಪ್ಪನ ಅಗ್ರಹಾರದ ಜೈಲಿನಿಂದ ಬಳ್ಳಾರಿ ಜೈಲಿಗೆ ಇವರನ್ನುಕರೆದುಕೊಂಡು ಹೋದ ಪೊಲೀಸ್ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಆ. 29ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಿಂದ ಬೆಳಗ್ಗೆ 4.30ಕ್ಕೆ ಹೊರಟಿದ್ದ ತಂಡ ಬೆಳಗ್ಗೆ 10 ಸುಮಾರಿಗೆ ಬಳ್ಳಾರಿ ನಗರ ಪ್ರವೇಶಿಸಿತ್ತು. ಆನಂತರ ನೇರವಾಗಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ದರ್ಶನ್ ರನ್ನು ಕರೆದುಕೊಂಡು ಹೋಗಲಾಯಿತು. ಆದರೆ, ದರ್ಶನ್ ಜೈಲು ಪ್ರವೇಶಿಸುವ ವೇಳೆ ಕಪ್ಪು ಬಣ್ಣದ ಪ್ಯೂಮಾ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದ ಅವರು, ಟೀ ಶರ್ಟ್ ನ ಬಟನ್ ಗಳಿಗೆ ಕೂಲಿಂಗ್ ಗ್ಲಾಸ್ ಸಿಕ್ಕಿಸಿಕೊಂಡಿದ್ದರು. ಬಲಗೈಗೆ ಎಂದಿನಂತೆ ಬೆಳ್ಳಿ ಕಡಗ ಹಾಕಿದ್ದರು. ಟೀ ಶರ್ಟ್ ಮೇಲೆ ಧರಿಸುವಂಥ ಪುಲ್ ಓವರ್, ಬಿಸ್ಲೆರಿ ಬಾಟಲಿಗಳನ್ನು ಕೈಯಲ್ಲಿ ಹಿಡಿದಿದ್ದರು. ಇವೆಲ್ಲ ಹೆಚ್ಚಿನ ಮೊತ್ತದ್ದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಐಷಾರಾಮಿ ಉಡುಗೆಗಳನ್ನು ಧರಿಸಿ, ಲಕ್ಷ ರೂ. ಮೊತ್ತದ ಕೂಲಿಂಗ್ ಗ್ಲಾಸ್ ಧರಿಸಿ ಸಿನಿಮಾ ಶೂಟಿಂಗ್ ಗೆ ಬಂದಂತೆ ಬಂದಿದ್ದಾರೆ ಎಂದು ಹವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೊಲೀಸ್ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.
ಪರಪ್ಪನ ಅಗ್ರಹಾರದ ಜೈಲಿನಲ್ಲಿ ದರ್ಶನ್ ಅವರು ರಾಜಾತಿಥ್ಯ ಸ್ವೀಕರಿಸುತ್ತಿದ್ದರೆಂಬ ಕಾರಣಕ್ಕೆ ಸರ್ಕಾರಕ್ಕೆ ಮುಜುಗರ ಉಂಟಾಗಿ, ಇಲ್ಲಿಗೆ ಶಿಫ್ಟ್ ಮಾಡಿದರೆ, ಅವರ ಎಂಟ್ರಿ ಮಾತ್ರ ಎಲ್ಲವನ್ನೂ ಸಂಶಯದಿಂದ ನೋಡುವಂತೆ ಮಾಡಿದೆ.