ಮಂಗಳೂರು: ರಾಜ್ಯದಲ್ಲಿ ಒಂದೇ ಒಂದು ಎಪಿಎಲ್ ಕಾರ್ಡ್ ರದ್ದಾಗಿಲ್ಲ. ಆದರೆ, ಪರಿಷ್ಕರಣೆ ವೇಳೆ ಬಿಪಿಎಲ್ ಅಲ್ಲದ ಕಾರ್ಡ್ ನ್ನು ಎಪಿಎಲ್ ಮಾಡಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸುನೀಲ್ ಕುಮಾರ್ ಅವರು ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿ ರದ್ದಾಗಿವೆ ಎಂದು ಆರೋಪಿಸಿದ್ದರು. ಇದಕ್ಕೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸುವ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ. ಒಂದೇ ಒಂದು ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕರ್ನಾಟಕದಲ್ಲಿ ಕಾರ್ಡ್ ಇದೆ. 6.50 ಕೋಟಿ ಜನ ಇದ್ದರೂ 4.50 ಕೋಟಿ ಜನರಿಗೆ ಕಾರ್ಡ್ ಕೊಟ್ಟಿದ್ದೇವೆ. ಅರ್ಹರಲ್ಲದವರು ಜಾಸ್ತಿ ಜನ ಇದ್ದಾರೆ. ಅದಕ್ಕಾಗಿ ಪರಿಶೀಲನೆ ನಡೆಯುತ್ತಿದೆ ಎಂದಿದ್ದಾರೆ.
ಪರಿಷ್ಕರಣೆಗಾಗಿ ನಿಯಮಾವಳಿಗಳನ್ನು ಹಿಂದಿನ ಸರ್ಕಾರವೇ ನೀಡಿದೆ. ಅದರಂತೆಯೇ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಆದಾಯ ತೆರಿಗೆ ಕಟ್ಟುವವರಿಗೆ, ಕಾರು ಇರುವವರಿಗೆಲ್ಲಾ ಎಪಿಎಲ್ ಗೆ ಹಾಕುತ್ತೇವೆ. ಅವರನ್ನು ತೆಗೆದು ಹಾಕಲ್ಲ. ಪರಿಷ್ಕರಣೆ ಮಾಡುವಾಗ ಅರ್ಹರಿಗೆ ಬಿಪಿಎಲ್ ಕೊಡುತ್ತೇವೆ ಎಂದಿದ್ದಾರೆ.


















