ಸೈನಿಕರು: ಈವರೆಗೆ 300 ಸೈನಿಕರ ಆತ್ಮಹತ್ಯೆ?
ಕೀವ್: ಉಕ್ರೇನ್ (Ukraine) ಪಡೆಗಳಿಗೆ ಸೆರೆಸಿಗುವ ಭೀತಿಯಿಂದ ರಷ್ಯಾ ಪರ ಸೆಣಸುತ್ತಿರುವ ಉತ್ತರ ಕೊರಿಯಾ ಸೈನಿಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ಉಕ್ರೇನ್ ನ ಕುರ್ಸ್ಕ್ ಪ್ರದೇಶದ ಹಿಮಾವೃತ ಬೆಟ್ಟವೊಂದರಲ್ಲಿ ಈ ವಾರ ಉತ್ತರ ಕೊರಿಯಾದ ಹಲವಾರು ಯೋಧರ ಮೃತದೇಹಗಳು(Dead bodies of warriors) ಪತ್ತೆಯಾಗಿವೆ. ಈ ಪೈಕಿ ಒಬ್ಬ ಸೈನಿಕ ಜೀವಂತವಾಗಿದ್ದು, ಉಕ್ರೇನ್ ವಿಶೇಷ ಪಡೆಗಳು ಆತನ ಸಮೀಪಕ್ಕೆ ಹೋಗುತ್ತಿದ್ದಂತೆ, ಆತನೂ ತನ್ನಲ್ಲಿದ್ದ ಗ್ರೆನೇಡ್ ಸ್ಫೋಟಿಸಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದಾನೆ. ಈವರೆಗೆ ಈ ರೀತಿ 300ಕ್ಕೂ ಅಧಿಕ ಉತ್ತರ ಕೊರಿಯಾ(North Korea) ಯೋಧರು ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿ ಮೂರು ವರ್ಷಗಳಾಗಿವೆ. ಮಿತ್ರರಾಷ್ಟ್ರ ರಷ್ಯಾಗೆ ನೆರವಾಗುವ ಉದ್ದೇಶದಿಂದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ರಷ್ಯಾ ಪರ ಹೋರಾಡಲು ತನ್ನ ದೇಶದ ಸಾವಿರಾರು ಸೈನಿಕರನ್ನು ಉಕ್ರೇನ್ ಯುದ್ಧಭೂಮಿಗೆ ಕಳುಹಿಸಿಕೊಟ್ಟಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, “ಯುದ್ಧದ ಸಂದರ್ಭದಲ್ಲಿ ನೀವೇನಾದರೂ ಸೆರೆಸಿಕ್ಕರೆ ಅದು ದೇಶದ್ರೋಹಕ್ಕೆ ಸಮ. ಹೀಗಾಗಿ ಉಕ್ರೇನ್ ಪಡೆಗಳಿಗೆ ಸೆರೆಸಿಗಬಹುದಾದ ಸಂದರ್ಭ ಬಂದರೆ ನಿಮ್ಮನ್ನು ನೀವು ಸ್ಫೋಟಿಸಿಕೊಂಡು, ಆತ್ಮಹತ್ಯೆಗೆ ಶರಣಾಗಬೇಕೇ ಹೊರತು ಯುದ್ಧಕೈದಿಗಳಾಗಿ ಜೈಲುಗಳಲ್ಲಿ ಕೊಳೆಯಬಾರದು” ಎಂದು ಸ್ವತಃ ಕಿಮ್ ಜಾಂಗ್ ಉನ್(Kim Jong Un) ತನ್ನ ಸೈನಿಕರಿಗೆ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಉತ್ತರ ಕೊರಿಯಾ ಸೈನಿಕರು ಇನ್ನೇನು ಉಕ್ರೇನ್ ಪಡೆಗಳ ಕೈಗೆ ಸಿಕ್ಕಿಬೀಳುತ್ತೇವೆ ಎಂಬ ಪರಿಸ್ಥಿತಿ ನಿರ್ಮಾಣವಾದೊಡನೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಉಕ್ರೇನ್ ತಿಳಿಸಿದೆ. “ಸ್ವಯಂ ಸ್ಫೋಟಿಸಿಕೊಳ್ಳುವುದು ಮತ್ತು ಆತ್ಮಹತ್ಯೆ: ಇದುವೇ ಉತ್ತರ ಕೊರಿಯಾದ ವಾಸ್ತವ” ಎಂದು ಈ ಹಿಂದೆಯೇ ಅಂದರೆ 2022ರಲ್ಲಿ ದಕ್ಷಿಣ ಕೊರಿಯಾಗೆ ಓಡಿಹೋಗಿದ್ದ 32 ವರ್ಷದ ಉತ್ತರ ಕೊರಿಯಾ ಸೈನಿಕ ಕಿಮ್ ಹೇಳಿದ್ದರು.
ರಷ್ಯಾದ ಪಶ್ಚಿಮ ಕುರ್ಸ್ಕ್ ಪ್ರಾಂತ್ಯವನ್ನು ಕಳೆದ ವರ್ಷ ಉಕ್ರೇನ್ ಅಚ್ಚರಿಯ ರೀತಿಯಲ್ಲಿ ತನ್ನ ವಶಕ್ಕೆ ಪಡೆದಿದೆ. ಈ ಪ್ರದೇಶವೊಂದರಲ್ಲೇ ಉತ್ತರ ಕೊರಿಯಾವು ರಷ್ಯಾ ಪರ ಸೆಣಸಲು ತನ್ನ 11,000 ಸೈನಿಕರನ್ನು ನಿಯೋಜಿಸಿತ್ತು. ಈ ಪೈಕಿ 3 ಸಾವಿರಕ್ಕೂ ಅಧಿಕ ಮಂದಿಯನ್ನು ಉಕ್ರೇನ್ ಪಡೆಗಳು ಹತ್ಯೆಗೈದಿವೆ ಎಂದು ಉಕ್ರೇನ್ ತಿಳಿಸಿದೆ.
ನಾವು ವಶಕ್ಕೆ ಪಡೆದಿರುವ ಉತ್ತರ ಕೊರಿಯಾ ಸೈನಿಕರನ್ನು ಸತತ ವಿಚಾರಣೆಗೆ ಒಳಪಡಿಸುತ್ತಿದ್ದೇವೆ. ಸತ್ಯವು ಹೊರಬರಬೇಕು ಎಂಬುದು ನಮ್ಮ ಉದ್ದೇಶ. ಎಲ್ಲ ಮಾಹಿತಿಗಳನ್ನೂ ನಾವು ದೃಢೀಕರಿಸುತ್ತಿದ್ದೇವೆ. ರಷ್ಯಾವು ಹೇಗೆ ಯುವಕರನ್ನು ದುರ್ಬಳಕೆ ಮಾಡಿಕೊಂಡು ಅವರ ಬದುಕನ್ನು ನಾಶ ಮಾಡುತ್ತಿದೆ ಎಂಬುದು ಜಗತ್ತಿಗೆ ಗೊತ್ತಾಗಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ(Volodymyr Zelensky) ಹೇಳಿದ್ದಾರೆ.