ಒಟ್ಟಾವಾ: ಕೆನಡಾದ ಮಿಸಿಸೌಗಾದಲ್ಲಿ 51 ಅಡಿ ಎತ್ತರದ ಭವ್ಯವಾದ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಇದು ಉತ್ತರ ಅಮೆರಿಕದ ಅತೀ ಎತ್ತರದ ರಾಮನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುರುಗ್ರಾಮ ಮೂಲದ ಕಲಾವಿದ ನರೇಶ್ ಕುಮಾರ್ ಕುಮಾವತ್ ಅವರು ಈ ಪ್ರತಿಮೆಯನ್ನು ನಿರ್ಮಿಸಿದ್ದು, ಇದರ ಸ್ಥಾಪನೆಯ ಹಾದಿಯಲ್ಲಿ ಅವರು ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ.
ಮನೇಸರ್‌ನಲ್ಲಿರುವ ಮಾತು ರಾಮ್ ಆರ್ಟ್ ಸೆಂಟರ್‌ನಲ್ಲಿ ಈ ಪ್ರತಿಮೆಯನ್ನು ತಯಾರಿಸಿ, ಹಂತ ಹಂತವಾಗಿ ಒಂದೊಂದೇ ಭಾಗಗಳನ್ನು ಕೆನಡಾಕ್ಕೆ ರವಾನಿಸಲಾಯಿತು. ನಂತರ ಅಮೆರಿಕದ ಇಂಜಿನಿಯರ್‌ಗಳು ಇದನ್ನು ಜೋಡಿಸಿದರು. ಫೈಬರ್‌ಗ್ಲಾಸ್ ಮತ್ತು ಉಕ್ಕಿನಿಂದ ತಯಾರಾದ ಈ ಪ್ರತಿಮೆಯು ವಿಮಾನ ತಯಾರಿಕೆಯಲ್ಲಿ ಬಳಸುವ ವಸ್ತುಗಳಿಂದ ಕೂಡಿದೆ. ಇದರ ಅನಾವರಣ ಸಮಾರಂಭದಲ್ಲಿ ಕೆನಡಾದ ಸಚಿವರು ಹಾಗೂ ಗಣ್ಯರು ಭಾಗವಹಿಸಿದ್ದರು.

ಸವಾಲುಗಳನ್ನು ಮೆಟ್ಟಿ ನಿಂತ ಕಲಾವಿದ
ನರೇಶ್ ಕುಮಾರ್ ಅವರ ತಂಡಕ್ಕೆ ಭಾರತ-ಕೆನಡಾ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ವೀಸಾ ಸಿಕ್ಕಿರಲಿಲ್ಲ. “ನಮ್ಮ ಕಾರ್ಮಿಕರಿಗೆ ವೀಸಾ ಸಿಗದ ಕಾರಣ, ಮೆಕ್ಸಿಕನ್ ಕಾರ್ಮಿಕರನ್ನು ಕರೆಸಿ ಪ್ರತಿಮೆಯನ್ನು ನಿರ್ಮಿಸಬೇಕಾಯಿತು. ದೇವರ ದಯೆಯಿಂದ ಕೆಲಸ ಪೂರ್ಣಗೊಂಡಿತು” ಎಂದು ನರೇಶ್ ಹೇಳುತ್ತಾರೆ.
ಇದಕ್ಕೂ ಒಂದು ತಿಂಗಳ ಹಿಂದೆ, ಬ್ರಾಂಪ್ಟನ್‌ನಲ್ಲಿ 54 ಅಡಿ ಎತ್ತರದ ಶಿವನ ಪ್ರತಿಮೆಯನ್ನೂ ನರೇಶ್ ಸ್ಥಾಪಿಸಿದ್ದರು. ಆಗಲೂ ವೀಸಾ ಸಮಸ್ಯೆ ಎದುರಾದಾಗ, ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ತಾವೇ ಕ್ರೇನ್, ಫೋರ್ಕ್‌ಲಿಫ್ಟ್‌ಗಳನ್ನು ನಿರ್ವಹಿಸಿ ಪ್ರತಿಮೆಯನ್ನು ನಿಲ್ಲಿಸಿದ್ದರು. “ಅದು ಸವಾಲಿನ ಕೆಲಸವಾಗಿತ್ತು, ಆದರೆ ನಾವು ಯಶಸ್ವಿಯಾದೆವು,” ಎಂದು ಅವರು ಸ್ಮರಿಸುತ್ತಾರೆ.
ಕಾರ್ಮಿಕನಿಂದ ಜಗದ್ವಿಖ್ಯಾತ ಶಿಲ್ಪಿಯವರೆಗೆ
ಶಿಲ್ಪಿಗಳ ಕುಟುಂಬದಿಂದ ಬಂದ ನರೇಶ್, ಆರಂಭದಲ್ಲಿ ವೈದ್ಯನಾಗುವ ಕನಸು ಕಂಡಿದ್ದರು. ಆದರೆ, ಪರೀಕ್ಷೆಯಲ್ಲಿ ಫೇಲ್ ಆದ ಕಾರಣ, ತಮ್ಮ ತಂದೆಯ ಪ್ರಾಜೆಕ್ಟ್ ಸೈಟ್‌ನಲ್ಲಿ ಕಾರ್ಮಿಕನಾಗಿ ಕೆಲಸ ಕಲಿಯಲು ಪ್ರಾರಂಭಿಸಿದರು. ನಂತರ ಗುಜರಾತಿನ ಬರೋಡಾದಲ್ಲಿ ಲಲಿತಕಲಾ ಕಾಲೇಜಿಗೆ ಸೇರಿ ಶಿಲ್ಪಕಲೆಯನ್ನು ಆಳವಾಗಿ ಅಭ್ಯಸಿಸಿದರು.
ತಂತ್ರಜ್ಞಾನದ ಸಹಾಯದಿಂದ, ನರೇಶ್ ತಮ್ಮ ಕಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಇಂದು ಅವರ ಕಲಾಕೃತಿಗಳು ಯುರೋಪ್, ಚಿಲಿ, ಕೋಸ್ಟಾರಿಕಾ ಸೇರಿದಂತೆ 80ಕ್ಕೂ ಹೆಚ್ಚು ದೇಶಗಳಲ್ಲಿವೆ. ಕೆನಡಾದಲ್ಲೇ ಅವರು ಒಂದು ಡಜನ್‌ಗೂ ಹೆಚ್ಚು ಬೃಹತ್ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ.
ಮೋದಿ ತಾಯಿಯಿಂದ ಸತೀಶ್ ಕೌಶಿಕ್‌ವರೆಗೆ
ನರೇಶ್ ಅವರು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ಪ್ರತಿಮೆಯನ್ನು ಅವರ ನಿಧನದ ನಂತರ ರಚಿಸಿ ಪ್ರಧಾನಿಗೆ ನೀಡಿದ್ದರು. “ಮೋದಿಯವರು ಅದನ್ನು ತುಂಬಾ ಇಷ್ಟಪಟ್ಟರು ಮತ್ತು ಸೀರೆಯ ಉದ್ದವನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದರು” ಎಂದು ನರೇಶ್ ಹೇಳುತ್ತಾರೆ. ನಂತರ, ಅವರು ಮೋದಿಯವರ ತಂದೆಯ ಪ್ರತಿಮೆಯನ್ನೂ ನಿರ್ಮಿಸಿದರು. ಅಲ್ಲದೆ, ತಮಗೆ ಇಷ್ಟವಾದ ನಟ ಸತೀಶ್ ಕೌಶಿಕ್ ಅವರ ನಿಧನದ ನಂತರ ಅವರ ಪ್ರತಿಮೆಯನ್ನು ರಚಿಸಿ, ಅನುಪಮ್ ಖೇರ್ ಅವರ ಕಚೇರಿಯಲ್ಲಿ ಇರಿಸಿದ್ದಾರೆ.
ಪರಂಪರೆ ಮುಂದುವರಿಸಿದ ಮಗಳು
ಶಿಲ್ಪಕಲೆಯು ನರೇಶ್ ಅವರ ಕುಟುಂಬದ ಪರಂಪರೆಯಾಗಿದೆ. ಅವರ ಮಗಳು ರುದ್ರಾಕ್ಷಿ ಕೂಡ ಅಮೆರಿಕದಲ್ಲಿ ಲಲಿತಕಲಾ ಕಾಲೇಜಿಗೆ ಸೇರಿ ಈ ಪರಂಪರೆಯನ್ನು ಮುಂದುವರಿಸಲು ಸಜ್ಜಾಗಿದ್ದಾರೆ. ವಾಷಿಂಗ್ಟನ್‌ನಲ್ಲಿ 100 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವುದು ನರೇಶ್ ಅವರ ಮುಂದಿನ ಯೋಜನೆಯಂತೆ.



















