ಬೆಂಗಳೂರು | ಭಾರೀ ವಿವಾದಕ್ಕೆ ಕಾರಣ ಆಗಿರುವ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಬಗ್ಗೆ ನಟಿ ನೋರಾ ಫತೇಹಿ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.
ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಿಂದಿ ವರ್ಷನ್ ಹಾಡನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ. ಇಷ್ಟೆಲ್ಲ ವಿವಾದ ಆಗಿದ್ದಕ್ಕೆ ನಟಿ ನೋರಾ ಫತೇಹಿ ಇದೀಗ ಪ್ರತಿಕ್ರಿಯೆ ನೀಡಿದ್ದು, ಹಾಡಿನಲ್ಲಿ ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂಬುದು ನನಗೆ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ ಅವರು ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ್ದಾರೆ. ‘ಕೆಲವು ವಿಷಯಗಳನ್ನು ನಾನು ಸ್ಪಷ್ಟಪಡಿಸಬೇಕಿದೆ. ನಾನು ಈ ಹಾಡನ್ನು 3 ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದು, ಸಂಜಯ್ ದತ್ ಅವರಂತಹ ದೊಡ್ಡ ಕಲಾವಿದರು ಇರುವ ದೊಡ್ಡ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದೆ. ಕನ್ನಡ ಭಾಷೆ ನನಗೆ ತಿಳಿಯುವುದಿಲ್ಲ. ಶೂಟಿಂಗ್ ಮಾಡುವಾಗ ಹಾಡಿನ ಅರ್ಥ ತಿಳಿಯಲು ನಾನು ಚಿತ್ರತಂಡದ ಮೇಲೆ ಅವಲಂಬಿತಳಾಗಿದ್ದೆ. ಅವರು ಭಾಷಾಂತರ ಮಾಡಿ ಹೇಳಿದಾಗ ನನಗೆ ಯಾವುದೂ ಅಸಭ್ಯ ಅಂತ ಅನಿಸಿರಲಿಲ್ಲ’ ಎಂದು ನೋರಾ ಫತೇಹಿ ಹೇಳಿದ್ದಾರೆ.
‘ನಾನು ಅಲ್ಲಿ ಎಲ್ಲರ ಎದುರು ಗೌರವಯುತವಾಗಿ ನಡೆದುಕೊಳ್ಳಲೇ ಬೇಕಿತ್ತು. ಹಿಂದಿ ವರ್ಷನ್ ಹಾಡು ಪ್ಲೇ ಮಾಡಿದಾಗ ನನಗೆ ಎಲ್ಲವೂ ತಿಳಿಯಿತು. ಇದು ವಿವಾದ ಆಗುತ್ತೆ ಎಂಬುದು ಗೊತ್ತಾಯಿತು. ಯಾಕೆಂದರೆ ನನಗೆ ಹಿಂದಿ ಅರ್ಥ ಆಗುತ್ತದೆ. ಇದು ಸರಿ ಅಲ್ಲ ಅಂತ ನಾನು ನಿರ್ದೇಶಕರಿಗೆ ಆಗಲೇ ಎಚ್ಚರಿಕೆ ನೀಡಿದೆ. ನಾನು ಸಿನಿಮಾದಿಂದ ಹೊರಗೆ ಬರುತ್ತೇನೆ. ನಾವು ಯಾವುದೇ ಕಾರಣಕ್ಕೂ ಇದನ್ನು ಪ್ರಚಾರ ಮಾಡಲ್ಲ. ನನ್ನ ಘನತೆಗೆ ಧಕ್ಕೆ ಆಗಿದೆ ಅಂತ ನಿರ್ದೇಶಕರಿಗೆ ಹೇಳಿದೆ’ ಎಂದಿದ್ದಾರೆ ನೋರಾ.
‘ನನ್ನಂಥ ಕಲಾವಿದರಿಗೆ ಹೆಚ್ಚಿನ ಶಕ್ತಿ ಇರುವುದಿಲ್ಲ. ಇಂಥ ಚಿತ್ರರಂಗದಲ್ಲಿ ನನ್ನ ಅಭಿಪ್ರಾಯವನ್ನು ಯಾರೂ ಕೇಳಲ್ಲ. ವಿರೋಧ ವ್ಯಕ್ತವಾದ ಬಳಿಕ ಹಾಡನ್ನು ಡಿಲೀಟ್ ಮಾಡಿದ್ದಾರೆ ಎಂಬುದು ಸಮಾಧಾನಕರ ಸಂಗತಿ. ನೀವೆಲ್ಲ ವಿರೋಧಿಸಿದಕ್ಕೆ ಧನ್ಯವಾದಗಳು. ಇಂಥ ಹಾಡು ಸರಿಯಲ್ಲ ಎನಿಸಿದರೆ ಅದನ್ನು ತಯಾರಿಸಿದ ಚಿತ್ರತಂಡವನ್ನು ಹೊಣೆಗಾರರನ್ನಾಗಿ ಮಾಡಬೇಕು. ವಿರೋಧಿಸುವಾಗ ಅವರ ಹೆಸರು ಮತ್ತು ಫೋಟೋವನ್ನೇ ಬಳಸಬೇಕು. ಆಗ ಮಾತ್ರ ಅವರಿಗೆ ಭಯ ಇರುತ್ತದೆ. ಇನ್ಮುಂದೆ ಬಹಳ ಎಚ್ಚರಿಕೆಯಿಂದ ಇರುತ್ತೇನೆ’ ಎಂದು ನೋರಾ ಫತೇಹಿ ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕಾಗಿ ಲಂಚಕ್ಕೆ ಬೇಡಿಕೆ – ಡ್ರಗ್ ಕಂಟ್ರೋಲರ್ ಸೇರಿ ಮೂವರು ‘ಲೋಕಾ’ ಬಲೆಗೆ



















