ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿ ಯೇತರ ಕಟ್ಟಡಗಳಿಗೆ ಬೀಗ ಹಾಕುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದ್ದಾರೆ.
ಮಲ್ಲೆಶ್ವರದ ಐಪಿಪಿ ಸಭಾಂಗಣ ಕೊಠಡಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ವಲಯ ಸಹಾಯಕ ಕಂದಾಯ ಅಧಿಕಾರಿಗಳು, ವ್ಯಾಪ್ತಿವಾರು ಸಭೆ ನಡೆಸಿ ಉಪ ವಿಭಾಗ ವ್ಯಾಪ್ತಿಯಲ್ಲಿ ಪ್ರಕರಣ ಪಟ್ಟಿ ಅನುಸಾರ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಬಾಕಿ ಆಸ್ತಿ ತೆರಿಗೆದಾರರಿಗೆ ‘ಒಂದು ಬಾರಿ ಪರಿಹಾರ’ (ಒಟಿಎಸ್) ಯೋಜನೆ ಪುನರಾರಂಭಿಸಲಾಗಿದೆ. 30ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲವಾದರೆ ಡಿ.1ರಿಂದ ಪಾವತಿಸುವ ಬಾಕಿ ಆಸ್ತಿ ತೆರಿಗೆ ದುಪ್ಪಟ್ಟಾಗಲಿದೆ ಎಂದು ಸೂಚಿಸಲಾಗಿದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡುವವರು ಸಮರ್ಪಕವಾಗಿ ಯೋಜನೆ ಲಾಭ ಪಡೆದಿಲ್ಲ. ನಗರದಲ್ಲಿ 250 ಕೋಟಿ ರೂ. ಅಧಿಕ ಬಾಕಿ ಇರುವ 16 ಸಾವಿರ ಪ್ರಕರಣಗಳಿವೆ. 400 ಕೋಟಿ ರೂ. ಹೆಚ್ಚು ಬಾಕಿ ಇರುವ ಅಂದಾಜು 2.4 ಲಕ್ಷ ಸುಸ್ತಿದಾರರರು ತೆರಿಗೆ ಪಾವತಿಸಿಲ್ಲ ಎಂದು ಆಯುಕ್ತರು ಹೇಳಿದ್ದಾರೆ.