ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಹೇಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಇರುತ್ತದೆಯೋ, ಸರ್ಕಾರಿ ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಇರುತ್ತದೆ. ಆಕಸ್ಮಿಕವಾಗಿ ಸರ್ಕಾರಿ ನೌಕರ ನಿಧನರಾದರೆ, ಆತನ ಜಿಪಿಎಫ್ ಹಣವು ಯಾರಿಗೆ ಸೇರಬೇಕು ಎಂಬುದರ ಕುರಿತು ಈಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರನು ತಾಯಿಯೊಬ್ಬಳನ್ನೇ ನಾಮಿನಿಯನ್ನಾಗಿ ಹೆಸರಿಸಿದರೂ, ಆತ ನಿಧನ ಹೊಂದಿದ ಬಳಿಕ ಪತ್ನಿಗೂ ಜಿಪಿಎಫ್ ಹಣದಲ್ಲಿ ಸಮನಾಗಿ ಹಂಚಿಕೆ ಮಾಡಬೇಕು. ಮದುವೆಯಾದ ಬಳಿಕ ಪತ್ನಿಯು ಕೂಡ ಕುಟುಂಬದ ಭಾಗವಾಗುವ ಕಾರಣ, ನಾಮಿನಿಯನ್ನಾಗಿ ಹೆಸರಿಸದಿದ್ದರೂ ಆಕೆಗೆ ಜಿಪಿಎಫ್ ಹಣದಲ್ಲಿ ಪಾಲು ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದ ಬೊಳ್ಳ ಮೋಹನ್ ಎಂಬುವರು 2000ನೇ ಇಸವಿಯಲ್ಲಿ ಸರ್ಕಾರಿ ಹುದ್ದೆಗೆ ಸೇರಿದ್ದರು. ಇವರು ಮದುವೆಯಾದ ಬಳಿಕ ಜಿಪಿಎಫ್ ಗೆ ಹೆಂಡತಿಯ ಹೆಸರನ್ನು ನಾಮಿನಿಯನ್ನಾಗಿ ನೇಮಿಸಿರಲಿಲ್ಲ. ನೌಕರನು 2021ರಲ್ಲಿ ನಿಧನರಾಗಿದ್ದರು. ಆದರೆ, ಜಿಪಿಎಫ್ ಗೆ ಪತ್ನಿಯ ಹೆಸರನ್ನು ನಾಮಿನಿಯನ್ನಾಗಿ ಮಾಡದ ಕಾರಣ ಬೊಳ್ಳ ಮೋಹನ್ ಪತ್ನಿ ಬೊಳ್ಳ ಮಾಲತಿ ಅವರಿಗೆ ಮೋಹನ್ ತಾಯಿ ಜಿಪಿಎಫ್ ಹಣ ನೀಡಲು ನಿರಾಕರಿಸಿದ್ದರು.
ಹಾಗಾಗಿ, ಮಾಲತಿ ಅವರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ನಾಮಿನಿಯನ್ನಾಗಿ ಮಾಡದ ಕಾರಣ ಮಾಲತಿ ಅವರಿಗೆ ಜಿಪಿಎಫ್ ಹಣದಲ್ಲಿ ಯಾವುದೇ ಪಾಲು ನೀಡಲು ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಎಲ್ಲ ಹಣವನ್ನು ಮೋಹನ್ ತಾಯಿಗೆ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಾಲತಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈಗ ಜಿಪಿಎಫ್ ಹಣವನ್ನು ಮೋಹನ್ ಅವರ ತಾಯಿ ಹಾಗೂ ಪತ್ನಿ ನಡುವೆ ಸಮನಾಗಿ ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಕನ್ನಡದ ಯುವ ಬರಹಗಾರರಿಗೆ 15 ಸಾವಿರ ರೂ. ಪ್ರೋತ್ಸಾಹಧನ : ಕೂಡಲೇ ಅರ್ಜಿ ಸಲ್ಲಿಸಿ



















