ವಾಷಿಂಗ್ಟನ್ : ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ಮೂಲದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೊ ಅವರು ಅಮೆರಿಕವನ್ನು ತೊರೆದು ಜುರಿಚ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಲಿದ್ದಾರೆ. ಸಂಶೋಧನಾ ನಿಧಿಗೆ ಸಂಬಂಧಿಸಿದ ವಿವಾದಗಳ ನಡುವೆ ಈ ನಿರ್ಧಾರ ಹೊರಬಿದ್ದಿದ್ದು, ಅವರು ಮುಂದಿನ ವರ್ಷದಿಂದ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಮ್ಮ ಕಾರ್ಯವನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ಅಮೆರಿಕದ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ದಂಪತಿ, ಮುಂದಿನ ವರ್ಷ ಜುಲೈನಿಂದ ಜುರಿಚ್ ವಿಶ್ವವಿದ್ಯಾಲಯದ (UZH) ಅರ್ಥಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿಶ್ವವಿದ್ಯಾಲಯ ಪ್ರಕಟಿಸಿದೆ. ಜಾಗತಿಕ ಬಡತನವನ್ನು ನಿವಾರಿಸುವಲ್ಲಿ ತಮ್ಮ ಪ್ರಾಯೋಗಿಕ ವಿಧಾನಕ್ಕಾಗಿ 2019 ರಲ್ಲಿ ಮೈಕೆಲ್ ಕ್ರೆಮರ್ ಅವರೊಂದಿಗೆ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಗೆದ್ದಿದ್ದ ಈ ಜೋಡಿ, ಅಮೆರಿಕವನ್ನು ತೊರೆಯಲು ನಿರ್ಧರಿಸಿದ ಕಾರಣವನ್ನು ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ.
ಆದಾಗ್ಯೂ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಸಂಶೋಧನಾ ನಿಧಿಯಲ್ಲಿನ ಕಡಿತ ಮತ್ತು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ವಾತಂತ್ರ್ಯದ ಮೇಲಿನ ದಾಳಿಗಳಿಂದಾಗಿ, ಪ್ರತಿಭಾನ್ವಿತರು ದೇಶವನ್ನು ತೊರೆಯಬಹುದು ಎಂದು ತಜ್ಞರು ಎಚ್ಚರಿಸುತ್ತಿರುವ ಸಮಯದಲ್ಲಿ ಇವರ ಈ ನಿರ್ಧಾರ ಮಹತ್ವ ಪಡೆದಿದೆ. ಈ ಹಿಂದೆ, ಎಸ್ತರ್ ಡುಫ್ಲೊ ಅವರು ಅಮೆರಿಕದ ವಿಜ್ಞಾನದ ಮೇಲಿನ “ಅಭೂತಪೂರ್ವ ದಾಳಿಗಳನ್ನು” ಖಂಡಿಸಿ ‘ಲೆ ಮಾಂಡೆ’ ಪತ್ರಿಕೆಯಲ್ಲಿ ಸಹ ಸಂಪಾದಕೀಯವನ್ನು ಬರೆದಿದ್ದರು.
ಜುರಿಚ್ ವಿಶ್ವವಿದ್ಯಾಲಯದಲ್ಲಿ, ಭಾರತೀಯ ಮೂಲದ ಬ್ಯಾನರ್ಜಿ ಮತ್ತು ಫ್ರೆಂಚ್-ಅಮೆರಿಕನ್ ಪ್ರಜೆಯಾದ ಡುಫ್ಲೊ ಅವರು ಲೆಮನ್ ಫೌಂಡೇಶನ್‌ನಿಂದ ಧನಸಹಾಯ ಪಡೆದ ಪ್ರಾಧ್ಯಾಪಕ ಹುದ್ದೆಗಳನ್ನು ಅಲಂಕರಿಸಲಿದ್ದಾರೆ. ಜೊತೆಗೆ, ಅವರು “ಲೆಮನ್ ಸೆಂಟರ್ ಫಾರ್ ಡೆವಲಪ್‌ಮೆಂಟ್, ಎಜುಕೇಶನ್ ಅಂಡ್ ಪಬ್ಲಿಕ್ ಪಾಲಿಸಿ” ಎಂಬ ಹೊಸ ಕೇಂದ್ರವನ್ನು ಸ್ಥಾಪಿಸಿ, ಕಾರ್ಯನಿರ್ವಹಿಸಲಿದ್ದಾರೆ. ನೀತಿ-ಸಂಬಂಧಿತ ಸಂಶೋಧನೆಗಳನ್ನು ಉತ್ತೇಜಿಸುವುದು ಮತ್ತು ವಿಶ್ವಾದ್ಯಂತ ಸಂಶೋಧಕರು ಹಾಗೂ ಶಿಕ್ಷಣ ನೀತಿ ನಿರೂಪಕರನ್ನು ಸಂಪರ್ಕಿಸುವುದು ಈ ಕೇಂದ್ರದ ಗುರಿಯಾಗಿದೆ.
“ವಿಶ್ವದ ಅತ್ಯಂತ ಪ್ರಭಾವಿ ಇಬ್ಬರು ಅರ್ಥಶಾಸ್ತ್ರಜ್ಞರು ನಮ್ಮ ವಿಶ್ವವಿದ್ಯಾಲಯಕ್ಕೆ ಸೇರುತ್ತಿರುವುದು ನಮಗೆ ಸಂತೋಷ ತಂದಿದೆ,” ಎಂದು ವಿಶ್ವವಿದ್ಯಾಲಯದ ಅಧ್ಯಕ್ಷ ಮೈಕೆಲ್ ಶೇಪ್‌ಮನ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡುಫ್ಲೊ, “ಹೊಸ ಲೆಮನ್ ಕೇಂದ್ರವು ಶೈಕ್ಷಣಿಕ ಸಂಶೋಧನೆ, ವಿದ್ಯಾರ್ಥಿ ಮಾರ್ಗದರ್ಶನ ಮತ್ತು ನೈಜ-ಪ್ರಪಂಚದ ನೀತಿ ಪ್ರಭಾವವನ್ನು ಜೋಡಿಸುವ ನಮ್ಮ ಕೆಲಸವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ” ಎಂದು ತಿಳಿಸಿದ್ದಾರೆ. ದಂಪತಿಗಳು ಎಂಐಟಿಯಲ್ಲಿ ತಮ್ಮ ಅರೆಕಾಲಿಕ ಹುದ್ದೆಗಳನ್ನು ಉಳಿಸಿಕೊಳ್ಳಲಿದ್ದಾರೆ.