ರಾಯಚೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಮಧ್ಯಾಹ್ನದ ಹೊತ್ತು ಮನೆ ಹಾಗೂ ಕಚೇರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಕಿವಿ ಮಾತು ಹೇಳಿದ್ದಾರೆ.
ರಾಯಚೂರಿನ (Raichuru) ಮಾನ್ವಿಯಲ್ಲಿ (Manvi) ಮಾತನಾಡಿದ ಅವರು, ಮಧ್ಯಾಹ್ನ 12 ರಿಂದ 3ರ ವರೆಗೆ ಆದಷ್ಟು ಮನೆ ಹಾಗೂ ಕಚೇರಿಯಲ್ಲಿರುವಂತೆ ನೋಡಿಕೊಳ್ಳಬೇಕು. ಮಧ್ಯಾಹ್ನ ಹೊತ್ತು ಫೀಲ್ಡ್ ವಿಸಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಸರ್ಕಾರಿ ನೌಕರರು ಹೊರಗಡೆ ವೀಕ್ಷಣೆಯನ್ನು ಮಧ್ಯಾಹ್ನ 12 ರಿಂದ 3ರ ವರೆಗೆ ಮಾಡಬಾರದು. ಬೆಳಗಿನ ಜಾವ ಅಥವಾ ಸಾಯಂಕಾಲ ಮಾಡಬೇಕು. ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ. ಸಮಯ ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಅಂತಾ ಹೇಳಿದ್ದಾರೆ.
ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 43 ರಿಂದ 44 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿಕೆಯಾಗುತ್ತದೆ. ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ಕಚೇರಿ ಹಾಗೂ ಮನೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು. ಶಾಲೆಗಳು, ಎಲ್ಲಾ ಸಂಸ್ಥೆಗಳು ಆ ಬಗ್ಗೆ ಗಮನ ಕೊಡಬೇಕು ಎಂದಿದ್ದಾರೆ.