ನವದೆಹಲಿ: ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕಲು ನಿರ್ದಿಷ್ಟ ಕಾಲಮಿತಿಯನ್ನು ನ್ಯಾಯಾಲಯ ನಿಗದಿಪಡಿಸಲು ಸಾಧ್ಯವಿಲ್ಲ. ಹಾಗಂತ, ರಾಜ್ಯಪಾಲರು ಅನಿರ್ದಿಷ್ಟಾವಧಿಯವರೆಗೆ ಮಸೂದೆಗಳನ್ನು ತಡೆಹಿಡಿದು ಕುಳಿತುಕೊಳ್ಳುವಂತಿಲ್ಲ; ಒಂದು ವೇಳೆ ‘ವಿವರಿಸಲಾಗದ ವಿಳಂಬ’ ಮಾಡಿದರೆ ಅದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ತೀರ್ಪು ನೀಡಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ (ರಾಜ್ಯಪಾಲರು ಅಥವಾ ರಾಷ್ಟ್ರಪತಿ) ನ್ಯಾಯಾಲಯಗಳು ಕಠಿಣ ಗಡುವು ವಿಧಿಸುವುದು ಸಂವಿಧಾನದ ಅಧಿಕಾರ ವಿಭಜನೆಯ ತತ್ವಕ್ಕೆ ವಿರುದ್ಧವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ, ತಮಿಳುನಾಡು ಪ್ರಕರಣದಲ್ಲಿ ದ್ವಿಸದಸ್ಯ ಪೀಠವು ರಾಜ್ಯಪಾಲರಿಗೆ ಗಡುವು ವಿಧಿಸಿ ನೀಡಿದ್ದ ಹಿಂದಿನ ಆದೇಶವನ್ನು ಪೀಠವು ರದ್ದುಪಡಿಸಿದೆ.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬಾರದು
ರಾಜ್ಯಪಾಲರು ಸಂವಿಧಾನದ 200ನೇ ವಿಧಿಯ ಪ್ರಕಾರ ಪ್ರಕ್ರಿಯೆ ಪಾಲಿಸದೆ ಮಸೂದೆಗಳನ್ನು ತಡೆಹಿಡಿಯುವುದು ‘ಒಕ್ಕೂಟ ವ್ಯವಸ್ಥೆಯ’ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಕೋರ್ಟ್ ಎಚ್ಚರಿಸಿದೆ. ರಾಜ್ಯಪಾಲರಿಗೆ ಕೇವಲ ಮೂರು ಆಯ್ಕೆಗಳಿವೆ:
- ಮಸೂದೆಗೆ ಒಪ್ಪಿಗೆ ನೀಡುವುದು.
- ಮರುಪರಿಶೀಲನೆಗಾಗಿ ವಿಧಾನಸಭೆಗೆ ವಾಪಸ್ ಕಳುಹಿಸುವುದು.
- ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸುವುದು.
ಇದನ್ನು ಬಿಟ್ಟು, ಶಾಸಕಾಂಗದ ಪ್ರಕ್ರಿಯೆಯನ್ನು ಹತಾಶೆಗೊಳಿಸುವ ಉದ್ದೇಶದಿಂದ ಅನಿರ್ದಿಷ್ಟವಾಗಿ ಕಡತಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ .
‘ಪರೋಕ್ಷ ಒಪ್ಪಿಗೆ’ ನೀಡಲು ಸಾಧ್ಯವಿಲ್ಲ
ವಿಳಂಬವಾಯಿತೆಂಬ ಕಾರಣಕ್ಕೆ ನ್ಯಾಯಾಲಯವೇ ಮಸೂದೆಗೆ “ಪರೋಕ್ಷ ಒಪ್ಪಿಗೆ” ನೀಡಿದೆ ಎಂದು ಭಾವಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದು ಸಂವಿಧಾನದ ಕಾರ್ಯದಲ್ಲಿ ನ್ಯಾಯಾಂಗದ ಹಸ್ತಕ್ಷೇಪವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ .
ಏನಿದು ಪ್ರಕರಣ?
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಹಲವು ಮಸೂದೆಗಳಿಗೆ ಅಂಕಿತ ಹಾಕದೆ ವಿಳಂಬ ಮಾಡುತ್ತಿದ್ದ ಹಿನ್ನೆಲೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143(1) ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಸಲಹೆ ಕೋರಿದ್ದರು. ಇದಕ್ಕೆ ಒಮ್ಮತದ ಉತ್ತರ ನೀಡಿರುವ ಐವರು ನ್ಯಾಯಮೂರ್ತಿಗಳ ಪೀಠ, ಅನಿರ್ದಿಷ್ಟ ವಿಳಂಬ ಕೂಡದು ಎಂದು ಸ್ಪಷ್ಟಪಡಿಸಿದೆ .
ಇದನ್ನೂ ಓದಿ: ಸಂಗಾತಿಯಿಂದ ಆತ್ಮಹತ್ಯೆ ಬೆದರಿಕೆ ಕ್ರೌರ್ಯಕ್ಕೆ ಸಮ : ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು


















