ದಾವಣಗೆರೆ : ಅನ್ನ ಊಟ ಮಾಡುವಾಗ ಧರ್ಮಸ್ಥಳದ ಹೆಸರು ಹೇಳಿ ಊಟ ಮಾಡುತ್ತೇವೆ. ಯಾರು ಏನೇ ಮಾಡಿದರೂ ಧರ್ಮಸ್ಥಳಕ್ಕೆ ಕಳಂಬ ಅಂಟಲ್ಲ. ಎಸ್.ಐ.ಟಿ ತನಿಖೆಯಿಂದ ಧರ್ಮಸ್ಥಳದ ಹಿರಿಮೆ ಹೆಚ್ಚಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ಯಾರು ಏನೇ ಷಡ್ಯಂತ್ರ ಮಾಡಿದರೂ ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ಆಗುವುದಿಲ್ಲ. ಆದರೇ, ಸೌಜನ್ಯಳಿಗೆ ನ್ಯಾಯ ದೊರಕಬೇಕು ಎಂದಿದ್ದಾರೆ.
ಯಾವುದೇ ಹಿಂದೂಗಳ ಕ್ಷೇತ್ರಗಳ ಬಗ್ಗೆ ಅಪಪ್ರಚಾರ ಮಾಡುವ ಹಕ್ಕು ಯಾರಿಗೂ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡುತ್ತೇವೆ. ನಮ್ಮ ದೇವರನ್ನು, ನಮ್ಮ ತಾಯಿಯನ್ನು ಅವಮಾನ ಮಾಡಿದರೂ ನಾನು ಅದನ್ನು ಖಂಡಿತ ಸಹಿಸುವುದಿಲ್ಲ. ಧರ್ಮಸ್ಥಳದ ಪ್ರಕರಣದ ಬಗ್ಗೆ ಎನ್.ಐ.ಎ ತನಿಖೆ ಆಗಲಿ ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು, ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರವೀಣ್ ಶೆಟ್ಟಿ, ಬಾನು ಮುಷ್ತಾಕ್ ಬಗ್ಗೆ ಅಪಾರ ಅಭಿಮಾನ ಇದೆ. ಬಾನು ಮುಷ್ತಾಕ್ ಬಗ್ಗೆ ವಿರೋಧ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೇ, ಅವರು ಕನ್ನಡಾಂಬೆಯ ಬಗ್ಗೆ ಹೇಳಿರುವ ವಿಚಾರವನ್ನು ನಾನು ಕೂಡ ವಿರೋಧಿಸುತ್ತೇನೆ. ಉದ್ಘಾಟನೆಗೆ ಅವರೊಂದಿಗೆ ಇನ್ನೊಬ್ಬರನ್ನೂ ಆಯ್ಕೆ ಮಾಡಬೇಕಿತ್ತು. ಯಾರೇ ಆಗಲಿ ತಾಯಿ ಭುವನೇಶ್ವರಿ, ಕನ್ನಡದ ಬಗ್ಗೆ ನಾಡು ನುಡಿ ಬಗ್ಗೆ ಅಭಿಮಾನ ಇದ್ದವರು ದಸರಾ ಉದ್ಘಾಟನೆ ಮಾಡಿದರೆ ಒಳ್ಳೆಯದು. ಕನ್ನಡದ ಬಗ್ಗೆ ಅವರು ಮಾತನಾಡಿದಾಗ ಕನ್ನಡದ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ.
ವಿಷ್ಣುವರ್ಧನ್ ಸಮಾಧಿ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬದುಕಿದ್ದಾಗಲೂ ಅವರಿಗೆ ತೊಂದರೆ ಆಗಿತ್ತು, ಸ್ವರ್ಗ ಸೇರಿದರೂ ಅವರಿಗೆ ಇನ್ನೂ ಸಮಸ್ಯೆ ಆಗುತ್ತಿದೆ. ವಿಷ್ಣುವರ್ಧನ್ ಸಮಾಧಿಯಾದ ಸ್ಥಳದಲ್ಲೇ ಅವರಿಗೆ ಸ್ಮಾರಕ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.